ಮುಂಬೈ: ಮುಂಬೈನಲ್ಲಿ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ಗುಂಡು ಹಾರಿಸಿದ ಇಬ್ಬರನ್ನು ಗುಜರಾತ್ ನ ಕಚ್‌ನ ಮಾತಾ ನೊ ಮಧ್ ಗ್ರಾಮದಲ್ಲಿ ಬಂಧಿಸಿದ ಗಂಟೆಗಳ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಲ್ಮಾನ್ ಖಾನ್ ಅವರನ್ನು ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಭೇಟಿಯಾಗಿದ್ದಾರೆ.
ಮುಂಬೈನ ನ್ಯಾಯಾಲಯವು ಬಂಧಿತ ಆರೋಪಿಗಳಾದ ವಿಕ್ಕಿ ಗುಪ್ತಾ(24) ಮತ್ತು ಸಾಗರ್ ಪಾಲ್(21) ಇಬ್ಬರನ್ನು ಏಪ್ರಿಲ್ 25 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಗುಂಡು ಹಾರಿಸುವ ಘಟನೆಗೂ ಮುನ್ನ ಇಬ್ಬರು ಆರೋಪಿಗಳು ಬಾಂದ್ರಾ ಪ್ರದೇಶದಲ್ಲಿನ ನಟನ ಮನೆಯ ಸುತ್ತ ಮೂರು ಬಾರಿ ಓಡಾಟ ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ 58 ವರ್ಷದ ಖಾನ್ ಅವರ ಮನೆಯ ಹೊರಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.
ಘಟನೆಯ ತನಿಖೆಯ ಸಮಯದಲ್ಲಿ, ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಳ್ಳುವ ಫೇಸ್‌ಬುಕ್ ಪೋಸ್ಟ್ ಹೊರಬಿದ್ದಿದೆ. ಪೋಲೀಸರ ಪ್ರಕಾರ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರು ಪೋಸ್ಟ್ ಅನ್ನು ಅಪ್ಲೋಡ್ ಮಾಡಿದ್ದಾರೆ. ಅಪರಾಧದಲ್ಲಿ ಅನ್ಮೋಲ್ ಬಿಷ್ಣೋಯ್ ಪಾತ್ರದ ತನಿಖೆ ಮಾಡುತ್ತಿದ್ದೇವೆ. ಸಾಗರ್ ಮತ್ತು ವಿಕ್ಕಿ ಇಬ್ಬರನ್ನೂ ಖಾನ್ ಅವರ ಮನೆಗೆ ಗುಂಡು ಹಾರಿಸಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೇಮಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ ಎಂದು ಕಚ್-ವೆಸ್ಟ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಮಹೇಂದ್ರ ಬಗಾಡಿಯಾ ಹೇಳಿದ್ದಾರೆ.
ಖಾನ್ ಅವರ ಮನೆಗೆ ಗುಂಡು ಹಾರಿಸಿದಾಗ, ವಿಕ್ಕಿ ಗ್ಯಾಂಗ್ ಸದಸ್ಯರೊಂದಿಗೆ ಸಾಗರ್ ಸಂಪರ್ಕದಲ್ಲಿದ್ದ, ಇಬ್ಬರು ವ್ಯಕ್ತಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಬಗಾಡಿಯಾ ಹೇಳಿದ್ದಾರೆ.