ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕೈಮೀರುತ್ತಿದೆ. ಕೆಲವು ದಿನಗಳಿಂದ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ.
ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂ ಜಾರಿ ಬೇಡ ಎಂದರೆ ಕೊರೋನಾ ನಿಯಮಗಳನ್ನು ಪಾಲಿಸಿ ಎಂದು ಸಿಎಂ ಹೇಳಿದ್ದಾರೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಸೇರಿದಂತೆ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು. ಲಾಕ್ಡೌನ್ ಜಾರಿಗೆ ಅವಕಾಶವಾಗದಂತೆ ಸಹಕಾರ ನೀಡಬೇಕೆಂದು ಸಿಎಂ ತಿಳಿಸಿದ್ದಾರೆ.
ಇಂದು ಸಂಜೆ 5 ಗಂಟೆಗೆ ವಿಕಾಸಸೌಧದಲ್ಲಿ ಸಿಎಂ ತುರ್ತು ಸಭೆ ನಡೆಸಲಿದ್ದಾರೆ. ಕೊರೋನಾ ಪರಿಸ್ಥಿತಿ ಕೈಮೀರಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಭೆ ನಡೆಸಲಾಗುವುದು. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.