ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ದೆಹಲಿ ಗಡಿಭಾಗದಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ದೆಹಲಿ ಸರ್ಕಾರ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದೆ.
ದೆಹಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೃಷಿ ಕಾಯ್ದೆಗಳ ಪ್ರತಿಯನ್ನು ಹರಿದು ಹಾಕಿದ್ದಾರೆ. ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಕೇಜ್ರಿವಾಲ್, ಬ್ರಿಟಿಷರಿಗಿಂತ ಕೆಟ್ಟವರು ಆಗಬಾರದು. ತರಾತುರಿಯಲ್ಲಿ ರೈತರಿಗೆ ದ್ರೋಹ ಮಾಡಿ ಕೃಷಿ ಕಾಯ್ದೆ ಜಾರಿ ಮಾಡುವ ಅಗತ್ಯವೇನಿತ್ತು? ಇಂತಹ ಕಾಯ್ದೆಗಳನ್ನು ರದ್ದು ಮಾಡುವ ಮೂಲಕ ರೈತರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
ರೈತರ ಅನುಕೂಲಕ್ಕಾಗಿ ಕಾಯ್ದೆಗಳನ್ನು ಜಾರಿಗೆ ತಂದಿಲ್ಲ. ಬದಲಾಗಿ ಬಿಜೆಪಿ ಚುನಾವಣೆ ಫಂಡ್ ಸಂಗ್ರಹಿಸಲು ಕಾಯ್ದೆ ಜಾರಿಗೆ ತರಲಾಗಿದೆ. ತೀವ್ರತರವಾದ ಚಳಿಯಲ್ಲಿ ರೈತರು ನಡುಗುತ್ತಲೇ ಹೋರಾಟ ನಡೆಸಿದ್ದಾರೆ. 22 ದಿನಗಳಲ್ಲಿ 20 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ರೈತರ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಬೇಕು. ರೈತ ವಿರೋಧಿಯಾದ ಇಂತಹ ಕಾಯ್ದೆಗಳನ್ನು ನಾವು ತಿರಸ್ಕರಿಸುತ್ತೇವೆ ಎಂದು ಹೇಳಿದ ಕೆಜ್ರಿವಾಲ್ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.