ಸರ್ಕಾರದ ಗ್ಯಾರಂಟಿ ಯೋಜನೆಗಳ ನೋಂದಣಿಗೆ ಹಣ ಪಡೆದಲ್ಲಿ ಸೇವಾ ಕೇಂದ್ರಗಳನ್ನು ಬಂದ್ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಎಲ್ಲಾ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸೂಚನೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ನೋಂದಣಿಗೆ ಹಣ ಪಡೆದಲ್ಲಿ ಸೇವಾ ಕೇಂದ್ರಗಳನ್ನು ಬಂದ್ ಮಾಡಿ. ಹಣ ಪಡೆದ ಸೇವಾ ಕೇಂದ್ರಗಳಿಗೆ ಬೀಗ ಹಾಕಿ. ಶೀಘ್ರವಾಗಿ ಫಲಾನುಭವಿಗಳ ನೋಂದಣಿಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಶಕ್ತಿ ಯೋಜನೆ ಖಾಸಗಿ ಬಸ್ ಗಳಿಗೂ ವಿಸ್ತರಿಸುವಂತೆ ಸಿಎಂಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದು, ಕರಾವಳಿಯಲ್ಲಿ ಖಾಸಗಿ ಬಸ್ ಗಳ ಪಾರಮ್ಯವಿದ್ದು, ನೇರವಾಗಿ ನಿಯಂತ್ರಿಸಲು ಆಗುವುದಿಲ್ಲ. ರೂಟ್ ಗಳು ಖಾಲಿ ಇರುವ ಕಡೆ ಹೊಸದಾಗಿ ಸರ್ಕಾರಿ ಬಸ್ ಹಾಕುತ್ತೇವೆ ಎಂದು ಸಭೆಯ ಬಳಿಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಎಲ್ಲೆಲ್ಲಿ ತೊಂದರೆ ಆಗುತ್ತಿದೆ ಎಂದು ನೋಡಿಕೊಂಡು ಸರ್ಕಾರಿ ಬಸ್ ಹಾಕುತ್ತೇವೆ. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಕರೆದಿರುವುದು ಅಸಮಾಧಾನದ ಕಾರಣಕ್ಕೆ ಅಲ್ಲ, ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ನಾಯಕರ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.