ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಯಾಕೋ ಜೆಡಿಎಸ್ ಕಡೆಗೆ ಮನಸ್ಸು ಮಾಡಿದಂತೆ ಕಾಣುತ್ತಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಗೋಣಿಬೀಡು ಗ್ರಾಮದಲ್ಲಿ ಸಿಎಂ ಇಬ್ರಾಹಿಂ ಆಡಿದ ಮಾತುಗಳು ಈ ಹೇಳಿಕೆಗೆ ಪುಷ್ಠಿ ನೀಡುವಂತಿದೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜೊತೆಗೆ ಗೋಣಿಬೀಡು ಗ್ರಾಮದಲ್ಲಿ ವೇದಿಕೆ ಹಂಚಿಕೊಂಡ ಸಿಎಂ ಇಬ್ರಾಹಿಂ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಹಾಡಿ ಹೊಗಳಿದ್ರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ತುಂಬಾನೇ ಇದೆ. 1994ರಲ್ಲಿ ನಾನು ಇದೇ ಭದ್ರಾವತಿಯಲ್ಲಿ ದೇವೇಗೌಡರ ಜೊತೆಗೆ ವೇದಿಕೆ ಹಂಚಿಕೊಂಡಿದ್ದೆ. ಇದೀಗ ಇಲ್ಲೇ ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಿದ್ದೇನೆ. ಇತಿಹಾಸ ಮರುಕಳುಸಲಿದೆ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದರು.
ಮೈತ್ರಿ ಸರ್ಕಾರದ ಪತನದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸಂಬಂಧ ಅಷ್ಟೇನು ಚೆನ್ನಾಗಿ ಇರಲಿಲ್ಲ. ಪರಸ್ಪರ ಟೀಕೆಗಳಲ್ಲಿಯೇ ಎರಡೂ ಪಕ್ಷದ ನಾಯಕರು ನಿರತರಾಗಿದ್ದರು. ಈ ನಡುವೆ ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷವನ್ನು ಹಾಡಿ ಹೊಗಳಿರುವುದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿದೆ.