ಮಾಜಿ ಸಚಿವ ಎಚ್ ಡಿ ರೇವಣ್ಣ ಬಂಧನವನ್ನು ಖಂಡಿಸಿ ಹಾಗೂ ಹಾಸನ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿ ಜಾತ್ಯಾತೀತ ಜನತಾದಳದ ನಾಯಕರು ಹಾಗೂ ಕಾರ್ಯಕರ್ತರು ರಾಜ್ಯದಾದ್ಯಂತ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೈಸೂರಿನಲ್ಲೂ ಕೂಡ ಜಿ.ಟಿ. ದೇವೇಗೌಡ ನೇತೃತ್ವದಲ್ಲಿ ಜನತಾದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಮುಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಚು ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಗದಾ ಪ್ರಹಾರ ನಡೆಸಿದ್ದು, ಪೆನ್ ಡ್ರೈವ್ ಪ್ರಕರಣದಲ್ಲಿ ಅಂತರಾಷ್ಟ್ರೀಯ ಜಾಲವೂ ಒಳಗೊಂಡಿದೆ. ಹೀಗಾಗಿ ಕರ್ನಾಟಕ ಪೊಲೀಸರು ಇದನ್ನು ತನಿಖೆ ನಡೆಸಲು ಆಗುವುದಿಲ್ಲ. ಕೂಡಲೇ ಸಿಬಿಐಗೆ ವಹಿಸುವ ಮೂಲಕ ಸತ್ಯಾಂಶ ಬಹಿರಂಗಪಡಿಸಲಿ ಎಂದು ಜಿ.ಟಿ. ದೇವೇಗೌಡ ಒತ್ತಾಯಿಸಿದ್ದಾರೆ.