ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದಾರೆ.
ಬೆಳಗಾವಿ ಭೇಟಿ ವೇಳೆಯಲ್ಲಿ ಅವರು ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧಸೇನಾ ಮುನಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ನೀವು ಮುಖ್ಯಮಂತ್ರಿಯಾಗುತ್ತೀರಿ ಎಂದು ಜೈನಮುನಿಗಳು ಆಶೀರ್ವಾದ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರನ್ನು ಕನಕಪುರದ ಬಂಡೆ ಎಂದು ಕರೆಯುತ್ತಾರೆ. ಬಂಡೆ ಅಂದ್ರೆ ಕಲ್ಲು. ಕಲ್ಲು ಕಟೆದು ಮೂರ್ತಿ ಮಾಡಲಾಗುತ್ತದೆ. ಅದೇ ರೀತಿ ನೀವು ಕೂಡ ವಿರೋಧಿಗಳು ಇದ್ದಷ್ಟು ಹೆಚ್ಚಾಗಿ ಬೆಳೆಯುತ್ತೀರಿ. ಮೂರ್ತಿ ಆಗುತ್ತೀರಿ. ಮುಂದಿನ ಮುಖ್ಯಮಂತ್ರಿ ಆಗುವಿರಿ ಎಂದು ಜೈನಮುನಿಗಳು ಆಶೀರ್ವಾದ ಮಾಡಿದ್ದಾರೆ.
ನಂತರ ಡಿ.ಕೆ. ಶಿವಕುಮಾರ್, ಬೆಳಗಾವಿಯ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ನನಗೆ ಎಲ್ಲಾ ಧರ್ಮಗಳಲ್ಲಿಯೂ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷಕ್ಕೂ ಜೈನಧರ್ಮಕ್ಕೆ ನಂಟು ಇದೆ. ಹಸ್ತದ ಗುರುತು ಜೈನಧರ್ಮದ ಗುರುಗಳು ನೀಡಿದ್ದರು ಎಂದು ತಿಳಿಸಿದ್ದಾರೆ.