alex Certify ರೈತರು, ಮಹಿಳೆಯರು, ಮಕ್ಕಳು, ಯುವಕರು ಸೇರಿ ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸ್ವಾತಂತ್ರ್ಯೋತ್ಸವ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರು, ಮಹಿಳೆಯರು, ಮಕ್ಕಳು, ಯುವಕರು ಸೇರಿ ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸ್ವಾತಂತ್ರ್ಯೋತ್ಸವ ಗಿಫ್ಟ್

ಬೆಂಗಳೂರು: 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನವ ಕರ್ನಾಟಕ ಅಮೃತ ಯೋಜನೆಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ

ಅಮೃತ ಗ್ರಾಮ ಪಂಚಾಯಿತಿ

ಆಯ್ದ 750 ಗ್ರಾಪಂಗಳಲ್ಲಿ ಬೀದಿದೀಪ, ಸೌರವಿದ್ಯುತ್ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರು, ಡಿಜಿಟಲ್ ಲೈಬ್ರರಿ, ಸುಸಜ್ಜಿತ ಶಾಲೆಗಳ ಸ್ಥಾಪನೆ, ಶೇಕಡ 100 ರಷ್ಟು ಘನ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಸೇರಿದಂತೆ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲಾಗುವುದು.

ಅಮೃತ ಗ್ರಾಮೀಣ ವಸತಿ ಯೋಜನೆ

ಆಯ್ದ 750 ಗ್ರಾಮಪಂಚಾಯಿತಿಗಳಲ್ಲಿ ವಸತಿ ರಹಿತ ಮತ್ತು ಆಶ್ರಯ ರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ ಜಾರಿಗೆ ತರಲಾಗುವುದು.

ಅಮೃತ ರೈತ ಉತ್ಪಾದಕ ಸಂಸ್ಥೆಗಳು

ರೈತರು, ನೇಕಾರರು ಮತ್ತು ಮೀನುಗಾರರಿಗೆ ಉತ್ಪನ್ನಗಳ ಉತ್ತಮ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ಸಂಸ್ಥೆಗಳನ್ನು ಸ್ಥಾಪನೆ ಮಾಡಲಿದ್ದು, ಪ್ರತಿ ಸಂಸ್ಥೆಗೆ 30 ಲಕ್ಷ ರೂಪಾಯಿಯಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂಪಾಯಿ ನೀಡಲಾಗುವುದು.

ಅಮೃತ ನಿರ್ಮಲ ನಗರ

ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛತೆಯ ಮತ್ತು ಸೌಂದರ್ಯ ಕಾಪಾಡಲು ಅಮೃತ ನಿರ್ಮಲ ನಗರ ಯೋಜನೆ ಜಾರಿಗೆ ತರಲಿದ್ದು, ಒಂದು ಕೋಟಿ ರೂಪಾಯಿಯಂತೆ 75 ಕೋಟಿ ರೂಪಾಯಿ ಅನುದಾನ ನೀಡಲಾಗುವುದು.

ಅಮೃತ ಶಾಲಾ ಸೌಲಭ್ಯ ಯೋಜನೆ

ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಸಮಗ್ರ ಸೌಲಭ್ಯ ಪೂರೈಕೆಗೆ ತಲಾ 10 ಲಕ್ಷ ರೂಪಾಯಿಯಂತೆ ಒಟ್ಟು 75 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು.

ಅಮೃತ ಅಂಗನವಾಡಿ ಕೇಂದ್ರಗಳು

750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ತಲಾ ಒಂದು ಲಕ್ಷ ರೂಪಾಯಿಯಂತೆ 7.50 ಕೋಟಿ ರೂಪಾಯಿ ವಿನಿಯೋಗ ಮಾಡಲಾಗುವುದು.

ಅಮೃತ ಸ್ವಸಹಾಯ ಕಿರು ಉದ್ದಿಮೆಗಳು

ಆಯ್ದ 7500 ಸ್ವಸಹಾಯ ಗುಂಪುಗಳನ್ನು ಕಿರು ಉದ್ದಿಮೆ ಸಂಸ್ಥೆಗಳಾಗಿ ರೂಪಿಸಲು ತಲಾ ಒಂದು ಲಕ್ಷ ರೂಪಾಯಿಯಂತೆ 75 ಕೋಟಿ ರೂಪಾಯಿ ನೀಡಲಾಗುವುದು.

ಅಮೃತ ಕೌಶಲ್ಯ ತರಬೇತಿ ಯೋಜನೆ

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75000 ಯುವಕರು, ಯುವತಿಯರಿಗೆ ಕೌಶಲ್ಯ ಅಭಿವೃದ್ಧಿಗೆ ಎರಡು ವರ್ಷಗಳ ತರಬೇತಿ ಯೋಜನೆ ಇದಾಗಿದ್ದು, 112 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. 75 ಸ್ಟಾರ್ಟಪ್ ಉದ್ಯಮಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.

ಅಮೃತ ನಗರೋತ್ಥಾನ

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತನಗರ ಸ್ಥಾನ ಯೋಜನೆ ಪ್ರಾರಂಭ. ಇದರಡಿಯಲ್ಲಿ 75 ಕೊಳಗೇರಿ ಅಭಿವೃದ್ಧಿ 75 ಕೆರೆ ಮತ್ತು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು.

ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತಿಕರಣ ಯೋಜನೆ

ಯೋಜನೆಯಡಿ ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂಪಾಯಿಯಂತೆ 150 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ.

ಅಮೃತ ಸಮುದಾಯ ಅಭಿವೃದ್ಧಿ ಯೋಜನೆ

ಆಯ್ದ 750 ಶಾಲೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ.

ಅಮೃತ ಕ್ರೀಡಾ ದತ್ತು ಯೋಜನೆ

ಪ್ಯಾರಿಸ್ ನಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಮರ್ಥ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ಗುರುತಿಸಿ ಅಗತ್ಯ ತರಬೇತಿ ಮತ್ತು ಪ್ರೋತ್ಸಾಹ ನೀಡಲಾಗುವುದು.

ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂತಿ ವೀರ ಸಂಗೊಳ್ಳಿರಾಯಣ್ಣ ಜಯಂತಿಯನ್ನು ಆಗಸ್ಟ್ 15ರಂದು ಸರ್ಕಾರದ ವತಿಯಿಂದ ಆಚರಿಸಲು ಆದೇಶ ಹೊರಡಿಸಲಾಗಿದೆ.

ಸಚಿವಾಲಯ ಸ್ಥಾಪನೆ

ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿ ರಾಜ್ಯದ ಪರಿಶಿಷ್ಟ ಪಂಗಡದ ಅಂದಾಜು 50 ಲಕ್ಷ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...