ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೊರೋನಾ ನಿರ್ವಹಣಾ ಸಭೆಯಲ್ಲಿ ಮುಂದಿನ ಎರಡು ವಾರ ಹಾಲಿ ನಿಯಮಗಳನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ.
ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಲಾಗಿದೆ. ವಿದೇಶ, ಕೇರಳ, ಮಹಾರಾಷ್ಟ್ರಗಳಲ್ಲಿ ಕೋವಿಡ್ ಸ್ಥಿತಿಗಳ ಬಗ್ಗೆ ತಿಳಿಸಿದ್ದು, ಡಾ. ದೇವಿಶೆಟ್ಟಿ, ಡಾ. ಸುದರ್ಶನ್ ಮೊದಲಾದವರು ತಮ್ಮ ವಿಚಾರ ತಿಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆ ಇನ್ನೂ ಪೂರ್ಣವಾಗಿಲ್ಲ. ಕೋವಿಡ್ ಅಲೆ ಕಡಿಮೆಯಾಗಿದ್ದರೂ, 1800 ರವರೆಗೂ ದಿನ ಹೊಸ ಪ್ರಕರಣ ಬರುತ್ತಿದ್ದು, ಜಾಗ್ರತೆ ವಹಿಸಲಾಗಿದೆ. ಶಾಲೆ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ. ಗಡಿ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ. ಪಾಸಿಟಿವಿಟಿ ಶೇಕಡ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲಾಗುವುದು, ಪೋಷಕರು, ಶಿಕ್ಷಕರು, ಸಿಬ್ಬಂದಿಗೆ ಲಸಿಕೆ ಹಾಕಬೇಕು, ಶಾಲೆ ಆರಂಭವಾದ ನಂತರ ಶೇಕಡ 2 ರಷ್ಟು ಪಾಸಿಟಿವಿಟಿ ದರ ಜಾಸ್ತಿ ಆದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾವಾರು ಕೋವಿಡ್ ಮ್ಯಾನೇಜ್ ಮೆಂಟ್ ಪ್ಲಾನ್ ಮಾಡಲಾಗುವುದು.
ಕಡಿಮೆ ಸೋಂಕು ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುವುದು. ಒಂದು ವಾರ ಶಾಲೆಯನ್ನು ಮುಚ್ಚುವ ಜೊತೆಗೆ ಸ್ಯಾನಿಟೈಸ್ ಮಾಡಿ ವಾರದ ನಂತರ ಶಾಲೆ ಆರಂಭಿಸಲಾಗುವುದು. ಶಾಲೆಗಳನ್ನು ಆರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಜಿಲ್ಲಾವಾರು ಪಾಸಿಟಿವಿಟಿ ದರ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.