ಬೆಂಗಳೂರು: ದೇಶ ಬೆಳೆಸುವ ಶಕ್ತಿ ನಮ್ಮ ಗುರುಗಳಲ್ಲಿ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನನಗೆ ಗಣಿತ ಕಲಿಸಿದ ಗುರುಗಳನ್ನು ನಾನು ಇಂದಿಗೂ ಕೂಡ ಮರೆತಿಲ್ಲ ಎಂದು ತಿಳಿಸಿದ್ದಾರೆ.
ಶಿಕ್ಷಕರ ನೇಮಕಾತಿ ಬಹಳ ದಿನಗಳಿಂದ ಉಳಿದುಕೊಂಡಿದ್ದು, 5000 ಶಿಕ್ಷಕರ ನೇಮಕಾತಿಗೆ ಇಂದು ತೀರ್ಮಾನಿಸಲಾಗಿದೆ. ವರ್ಷದೊಳಗೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ನಮಗೆಲ್ಲರಿಗೂ ಆದರ್ಶವಾಗಿದೆ. ಸಾತ್ವಿಕತೆ, ವೈಚಾರಿಕತೆ ತುಂಬಿದ ಅಪರೂಪದ ನಾಯಕರಾಗಿದ್ದರು. ಗುರುಗಳಿಲ್ಲದೆ ನಾಗರಿಕ ಸಮಾಜ ಕಟ್ಟುವುದಕ್ಕೆ ಆಗುವುದಿಲ್ಲ. ದೇವರ ಬಳಿಕ ಗುರುವೇ. ಗುರು ಇಲ್ಲದೆ ದೇವರು ಸಿಗುವುದಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದ್ದು, ಹೊಸ ಶಿಕ್ಷಣ ನೀತಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಇದಕ್ಕಾಗಿ ಸಿದ್ಧರಾಗಬೇಕಿದೆ. ಹೊಸ ನೀತಿ ಬಂದಾಗ ಪರ-ವಿರೋಧ ಇರುವುದು ಸಹಜ. ಇಂದಿನ ಸವಾಲು ಎದುರಿಸಲು ಮಕ್ಕಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.