
ಬೆಂಗಳೂರು: ಮೊದಲ ದಿನವೇ ಆಡಳಿತಕ್ಕೆ ಚುರುಕು ಮುಟ್ಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕನಿಷ್ಠ 15 ದಿನಗಳ ಒಳಗೆ ಕಡತ ವಿಲೇವಾರಿಗೆ ಆದೇಶ ನೀಡಿದ್ದಾರೆ.
ಎಲ್ಲ ಇಲಾಖೆಗಳಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ. ಚಲ್ತಾ ಹೈ ವರ್ತನೆ ಇನ್ನು ಮುಂದೆ ನಡೆಯುವುದಿಲ್ಲ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ಇರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರವಾಗಿ ಕೆಲಸ ನಿರ್ವಹಿಸಬೇಕು. ಎಲ್ಲ ವರ್ಗದವರ ಪರವಾಗಿ ಸರ್ಕಾರದ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಸರ್ಕಾರದ ಎಲ್ಲ ಇಲಾಖೆಗಳ ನಡುವೆ ಸಮನ್ವಯ, ಸಹಕಾರವಿರಬೇಕು. ನಾವೆಲ್ಲರೂ ಒಂದು ತಂಡದಂತೆ ಕೆಲಸ ಮಾಡಬೇಕು. ನಿಗದಿತ ಸಮಯದೊಳಗೆ ಕೆಲಸ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು. ಅಧಿಕಾರಶಾಹಿ ಚಲ್ತಾ ಹೈಣ್ಣು ವರ್ತನೆ ಬಿಡಬೇಕು. ಎಲ್ಲಾ ಅಧಿಕಾರಿಗಳಿಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ಯಾವುದೇ ಸಮಯದಲ್ಲಿ ನನ್ನೊಂದಿಗೆ ಚರ್ಚಿಸಬಹುದು ಎಂದರು.
ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಆಡಳಿತ ನೀಡಲು ತಂಡ ಸ್ಪೂರ್ತಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇಲಾಖೆಗಳ ಕಾರ್ಯ ನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದಾರೆ.