
ನವದೆಹಲಿ: ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿಗೂಢ ನಡೆ ಅನುಸರಿಸಿದ್ದಾರೆ. ಮಧ್ಯರಾತ್ರಿಯವರೆಗೂ ಅಜ್ಞಾತ ಸ್ಥಳಕ್ಕೆ ತೆರಳಿದ್ದರೆನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ದೆಹಲಿಗೆ ತೆರಳಿದ ಸಿಎಂ, ಬೆಂಗಾವಲು ಪಡೆಯನ್ನು ಬಿಟ್ಟು ತೆರಳಿದ್ದು, ತಡರಾತ್ರಿ 1.30 ರ ವೇಳೆಗೆ ಕರ್ನಾಟಕ ಭವನಕ್ಕೆ ಆಗಮಿಸಿದ್ದಾರೆ. ಕೇಂದ್ರ ಸಚಿವ ಜೋಶಿ ಭೇಟಿ ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರೆನ್ನಲಾಗಿದೆ.
ಸದ್ಯ ಕರ್ನಾಟಕ ಭವನದಲ್ಲಿ ತಂಗಿರುವ ಸಿಎಂ, ಬೆಳಗ್ಗೆ 9 ಗಂಟೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಸಂಪುಟ ರಚನೆಗೆ ಇವತ್ತೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಇವತ್ತು ಪಕ್ಷದ ವರಿಷ್ಠರು ಓಕೆ ಅಂದ್ರೆ ನಾಳೆಯೇ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ ಇದೆ.
ಬೊಮ್ಮಾಯಿ ಅವರ ಸಂಪುಟದಲ್ಲಿ ಹೊಸಬರಿಗೆ ಸ್ಥಾನ ನೀಡಬಹುದಾದ ಸಾಧ್ಯತೆ ಇದೆ. ರಾಜುಗೌಡ, ದತ್ತಾತ್ರೇಯ ಪಾಟೀಲ್, ರಾಮದಾಸ್, ರೇಣುಕಾಚಾರ್ಯ, ಸುನಿಲ್ ಕುಮಾರ್, ಮುನಿರತ್ನ, ತಿಪ್ಪಾರೆಡ್ಡಿ, ಎಂ.ಪಿ. ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ಹಾಲಪ್ಪ ಆಚಾರ್, ವೀರಣ್ಣ ಚರಂತಿಮಠ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.