ಬೆಂಗಳೂರು: ಕೊರೋನಾ ರೂಪಾಂತರ ಒಮಿಕ್ರೋನ್ ಆತಂಕದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ರೂಪಾಂತರಿ ತಳಿ ಒಮಿಕ್ರೋನ್ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಕೇರಳ ಮತ್ತು ಮಹಾರಾಷ್ಟ್ರ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಮಂಗಳೂರು, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಚೆಕ್ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ತಪಾಸಣೆಗೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಸರ್ಕಾರಿ ಕಚೇರಿಗಳು, ಮಾಲ್ ಗಳು, ಹೋಟೆಲ್ ಸಪ್ಲೈ ಮಾಡುವವರು ಎರಡು ಡೋಸ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಮೆಡಿಕಲ್ ಕಾಲೇಜು ಮತ್ತು ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಹೆಚ್ಚಿಸಲು ಸೂಚಿಸಲಾಗಿದೆ.
ಶಾಲಾ, ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು
ಈಗಾಗಲೇ ಸೋಂಕು ಹೆಚ್ಚಾಗಿರುವ ಪ್ರದೇಶಗಳು, ಶಾಲೆಗಳಲ್ಲಿ ನಿಗಾವಹಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
ಕೇರಳದಿಂದ ಬರುವವರಿಗೆ RTPCR ಟೆಸ್ಟ್ ಕಡ್ಡಾಯ
ಫ್ರಂಟ್ ಲೈನ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಚರ್ಚಿಸಲಾಗಿದೆ.
ಮದುವೆ, ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮ ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಿಲಾಗಿದೆ.
ಎಲ್ಲ ಶಾಲಾ-ಕಾಲೇಜುಗಳಿಗೆ ಆರೋಗ್ಯ ಇಲಾಖೆಯಿಂದ ಮತ್ತೊಮ್ಮೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ.
ಶಾಲಾ ವಾರ್ಷಿಕೋತ್ಸವ, ಸೆಮಿನಾರ್ ಮೊದಲಾದ ಕಾರ್ಯಕ್ರಮಗಳನ್ನು ರದ್ದು, ಇಲ್ಲವೇ ಮುಂದೂಡುವುದರ ಬಗ್ಗೆ ಚರ್ಚಿಸಲಾಗಿದೆ.
ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಿಗಾ ವಹಿಸಲಾಗಿದೆ.
ಸೋಂಕು ಏರಿಳಿತ ಆಧರಿಸಿ ಕಠಿಣ ನಿರ್ಬಂಧ ಜಾರಿಗೊಳಿಸುವುದು, ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.