ಬೆಂಗಳೂರು: ವರ್ಗಾವಣೆ ನೀತಿ ಬದಲಾವಣೆಗೆ ಸಿಎಂ ಸೂಚನೆ ನೀಡಿದ್ದಾರೆ. ಬಿ, ಸಿ ಮತ್ತು ಡಿ ವೃಂದದ ಖಾಲಿ ಇರುವ ಹುದ್ದೆಗಳಿಗೆ ಇಲಾಖೆ ಸಚಿವರ ಹಂತದಲ್ಲಿ ವರ್ಗಾವಣೆ ಆದೇಶ ಹೊರಡಿಸಬೇಕು. ತೆರವಾಗುವ ಹುದ್ದೆಗಳಿಗೆ ಯಾವುದೇ ವರ್ಗಾವಣೆ ಆದೇಶ ಹೊರಡಿಸಬಾರದೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.
ಎ ವೃಂದದ ಖಾಲಿ ಹುದ್ದೆಗಳಲ್ಲಿನ ಸ್ಥಳನಿಯುಕ್ತಿಗೆ ಸಂಬಂಧಿಸಿದ ಪ್ರಸ್ತಾವಗಳನ್ನು ಮಾತ್ರ ಸಿಎಂ ಕಚೇರಿಗೆ ಸಲ್ಲಿಸಬೇಕು ಎಂದು ಸಿಎಂ ತಿಳಿಸಿದ್ದಾರೆ. ನಿಯಮಿತ ಸ್ವರೂಪದ ವರ್ಗಾವಣೆ ಕೋರಿಕೆ ಫೈಲ್ ಗಳನ್ನು ಸಿಎಂ ಕಚೇರಿಗೆ ಕಳುಹಿಸುತ್ತಿರುವುದಕ್ಕಾಗಿ ಆಕ್ಷೇಪಿಸಿ ಟಿಪ್ಪಣಿ ಹೊರಡಿಸಿರುವ ಸಿಎಂ ಇಂತಹ ಬೆಳವಣಿಗೆ ನಿಲ್ಲದಿದ್ದರೆ ಇಲಾಖೆಗಳಲ್ಲಿ ಕೆಲಸ ಕುಂಠಿತವಾಗುತ್ತದೆ ಎಂದಿದ್ದಾರೆ.
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಕ್ತಾಯಗೊಂಡಿರುವುದರಿಂದ ವರ್ಗಾವಣೆ ನೀತಿಯಲ್ಲಿ ಕೆಲವು ಬದಲಾವಣೆ ತರುವಂತೆ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಇಲಾಖೆ ಸಚಿವರ ಹಂತದಲ್ಲಿ ಬಿ,ಸಿ,ಡಿ ವೃಂದದ ವರ್ಗಾವಣೆ ಆದೇಶ ಹೊರಡಿಸಬೇಕು ಎಂದು ಹೇಳಲಾಗಿದೆ.