ಬೆಳಗಾವಿ: ಗಡಿ ವಿವಾದ ವಿಚಾರವಾಗಿ ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಭಾರತಕ್ಕೆ ಚೀನಾ ನುಗ್ಗಿದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಚೀನಾ ರೀತಿಯಲ್ಲಿ ಆಕ್ರಮಣ ಮಾಡುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಈ ಕಡೆಯೂ ಭಾರತ ದೇಶವಿದೆ ಅಂತ ಅವರಿಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸುವರ್ಣಸೌಧದಲ್ಲಿ ಮಹಾರಾಷ್ಟ್ರ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಮ್ಮವರು ಹೇಗೆ ಚೀನಾ ಹಿಮ್ಮೆಟ್ಟಿಸಿದರು. ಹಾಗೆ ನಾವೆಲ್ಲ ಕನ್ನಡಿಗರು. ಆಕ್ರಮಣ ಮಾಡಲು ನಾವೆಲ್ಲ ಒಂದೇ ದೇಶದಲ್ಲಿ ಇದ್ದೇವೆ. ಆದರೂ ಅವರು ಆ ಭಾಷೆಯನ್ನು ಬಳಸಿರುವುದಕ್ಕೆ ಉತ್ತರ ಕೊಡಬೇಕಿದೆ. ಈ ವಿಚಾರವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ.
ಗಡಿ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅದು ಆಗುವುದಿಲ್ಲ. ಈ ಹಿಂದೆ ಎನ್.ಸಿ.ಪಿ. ನಾಯಕರು ರಾಜಕೀಯ ಮಾಡಲು ಹೋಗಿ ವಿಫಲರಾಗಿದ್ದಾರೆ. ಈಗಲೂ ಸಹ ವಿಫಲರಾಗುತ್ತಾರೆ ಎಂದು ಸಿಎಂ ಹೇಳಿದ್ದಾರೆ.
ನಿನ್ನೆ ಗಡಿಗೆ ಬರುವ ಪ್ರಯತ್ನ ಮಾಡಿದ್ದರು. ಆದರೆ, ಜನರ ಬೆಂಬಲ ಸಿಗಲಿಲ್ಲ. ಪಕ್ಷದ ಧ್ವಜ ಹಿಡಿದು ಬಂದಿದ್ದು ನೋಡಿದರೆ ರಾಜಕೀಯ ಪ್ರೇರಿತ ಎನಿಸುತ್ತದೆ. ನಾನು ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಹೇಳೋಕೆ ಇಷ್ಟಪಡುತ್ತೇನೆ. ನಾವು ನಮ್ಮ ಪಕ್ಷದ ನಾಯಕರ ಜೊತೆಗೆ ಈಗಾಗಲೇ ಮಾತನಾಡಿದ್ದೇವೆ. ಕಾಂಗ್ರೆಸ್ ನವರು ಅಲ್ಲಿನ ನಾಯಕರ ಜೊತೆ ಮಾತನಾಡಲಿ ಎಂದರು.
ಗಡಿ ಕುರಿತು ಮಹಾರಾಷ್ಟ್ರದವರೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅವರ ಕೇಸ್ ವೀಕ್ ಆಗಿದೆ ಅನ್ನುವುದು ಗೊತ್ತಾಗಿದೆ. ಈ ಸಂದರ್ಭ ಉಪಯೋಗಿಸಿಕೊಂಡು ಲಾಭ ಪಡೆಯಲು ಹೋಗುತ್ತಿದ್ದಾರೆ. ಯಾವುದೇ ರೀತಿ ಗೊಂದಲ, ಘಟನೆಯಾಗದಂತೆ ನೋಡಿಕೊಂಡಿದ್ದೇವೆ. ಶಾಂತಿ ಭಂಗಕ್ಕೆ ಯಾವುದೇ ಅವಕಾಶ ಕೊಟ್ಟಿಲ್ಲ. ನಾಳೆ ವಿಧಾನಸಭೆಯಲ್ಲಿ ಇದಕ್ಕೆ ಸುಧೀರ್ಘವಾಗಿ ಉತ್ತರ ಕೊಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಮಹಾರಾಷ್ಟ್ರ ಡ್ಯಾಮ್ ಎತ್ತರ ಹೆಚ್ಚಳ ಮಾಡುವಂತೆ ಎನ್.ಸಿ.ಪಿ. ಶಾಸಕರು ಒತ್ತಡ ಹೇರುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಮಹಾರಾಷ್ಟ್ರ ಶಾಸಕರು ರಾಜಕೀಯ ಹೇಳಿಕೆಯನ್ನು ಕೊಡುತ್ತಿದ್ದಾರೆ ಅಷ್ಟೇ. ಮಹಾರಾಷ್ಟ್ರದಿಂದ ಯಾವ ನೀರನ್ನು ಸಹ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ರಾಜ್ಯದಿಂದಲೂ ಆಂಧ್ರಕ್ಕೆ ನೀರು ಹೋಗುತ್ತದೆ. ನಿಲ್ಲಿಸಲು ಆಗುತ್ತಾ? ಅತಿ ಹೆಚ್ಚು ಮಳೆ ಬಂದಾಗ ನೀರು ಇಟ್ಟುಕೊಂಡು ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಅಶೋಕ್ ವಾಗ್ದಾಳಿ
ಬೆಳಗಾವಿಗೆ ಪ್ರವೇಶಿಸುವುದಾಗಿ ಸಂಜಯ್ ರಾವತ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದು, ಬೊಗೊಳೋ ನಾಯಿ ಕಚ್ಚುವುದಿಲ್ಲ, ಹಾಗೆ ಕಚ್ಚುವ ನಾಯಿ ಬೊಗಳಲ್ಲ ಎಂದು ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಂಜಯ್ ರಾವತ್ ಹೇಳಿಕೆಗೆ ನಾವು ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ. ಸಂಜಯ್ ರಾವತ್ ನುಗ್ಗುವುದಲ್ಲ, ಒಂದು ಇಂಚು ಜಾಗವನ್ನು ಬಿಡುವುದಿಲ್ಲ. ಇವರೆಲ್ಲ ಲೆಕ್ಕಕ್ಕಿಲ್ಲ. ನಾವೆಲ್ಲ ಸಂವಿಧಾನದ ಅಡಿ ಕೆಲಸ ಮಾಡಬೇಕು. ಮಹಾಜನ್ ವರದಿಯೇ ಅಂತಿಮ. ನಮ್ಮ ರಾಜ್ಯದ ಒಂದು ಹಳ್ಳಿಯನ್ನು ಬಿಟ್ಟು ಕೊಡುವ ಮಾತೇ. ಇಲ್ಲ ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಮಹಾರಾಷ್ಟ್ರ ಜನರೇ ಹೇಳುತ್ತಿದ್ದಾರೆ ಎಂದರು.