ಬೆಂಗಳೂರು/ಹುಬ್ಬಳ್ಳಿ: ನಾಳೆಯಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅತ್ಯಂತ ಸರಳ ರೀತಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಲಾಗುವುದು. ಈಗಾಗಲೇ ಹೈಕೋರ್ಟ್ ಹಿಜಾಬ್ ಬಗ್ಗೆ ತೀರ್ಪು ನೀಡಿದೆ. ತೀರ್ಪು ಬಂದ ನಂತರ ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.
ಅಂದ ಹಾಗೆ, ಸೋಮವಾರದಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಕೊರೊನಾದಿಂದ ಪರೀಕ್ಷೆ ಇಲ್ಲದೆ 8 ಮತ್ತು 9ನೇ ತರಗತಿಯನ್ನು ಮಕ್ಕಳು ಪಾಸಾಗಿದ್ದರು. 10ನೇ ತರಗತಿಯಲ್ಲಿ ಕಠಿಣ ಪ್ರಶ್ನೆಗಳನ್ನು ನೀಡಿದರೆ ಕಷ್ಟ ಆಗುತ್ತದೆ ಎನ್ನುವ ಕಾರಣಕ್ಕೆ ಸುಲಭ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ಬಹು ಆಯ್ಕೆ ಮಾದರಿ ಪ್ರಶ್ನೆ ಹೆಚ್ಚಾಗಿರುವುದರಿಂದ ಪಾಸಾಗುವುದು ಸುಲಭವಾಗುತ್ತದೆ ಎಂದು ಹೇಳಲಾಗಿದೆ.
ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಿ ಬಹುಆಯ್ಕೆ ಪ್ರಶ್ನೆಗಳನ್ನು ಪ್ರತಿ ಸಲಕ್ಕಿಂತ ಹೆಚ್ಚಳ ಮಾಡಲಾಗಿದೆ. ಉತ್ತರವನ್ನು ಸುಲಭವಾಗಿ ಗುರುತಿಸುವಂತೆ ಆಯ್ಕೆಗಳಿರುತ್ತವೆ. ಮಕ್ಕಳಿಗೆ ಕಷ್ಟವೇನೂ ಆಗುವುದಿಲ್ಲ. ಯಾರೂ ಭಯ, ಆತಂಕವಿಲ್ಲದೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.