ಚಾಮರಾಜನಗರ: ಕಾಂಗ್ರೆಸ್ ದುರಾಡಳಿತದಿಂದ ಬೆಂಗಳೂರಿನಲ್ಲಿ ಮಳೆ ಅವಾಂತರ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಗೆ ಬಿಜೆಪಿಯೇ ನೇರ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೇಳಿದ್ದೇ ವೇದವಾಕ್ಯವಲ್ಲ, ಬೆಂಗಳೂರು ನಗರದಲ್ಲಿ ಮಳೆ ಏನು ನಿನ್ನೆ ಮೊನ್ನೆ ಬಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸೂಕ್ತ ಸಿದ್ಧತೆ ಮಾಡಿಕೊಂಡಿಲ್ಲ. ಅಧಿಕಾರಕ್ಕೆ ಬಂದು ಮೂರು ವರ್ಷ ಆಯಿತು, ಏನು ಮಾಡುತ್ತಿದ್ದರು? 2019 ರಲ್ಲಿಯೂ ಪ್ರವಾಹ ಬಂದಿತ್ತು. 2020 ರಲ್ಲಿಯೂ ಪ್ರವಾಹ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೂ ಬೆಂಗಳೂರಿನಲ್ಲಿ ಪ್ರವಾಹ ಬಂದಿತ್ತು, ರಾಜಕಾಲುವೆ ಒತ್ತುವರಿ ತೆರವು ಮಾಡಲಿಲ್ಲ, ಒಳಚರಂಡಿ ಸ್ವಚ್ಛಗೊಳಿಸಲಿಲ್ಲ. ನಮ್ಮಿಂದಲೇ ಪ್ರವಾಹ ಬಂದಿದೆ ಅಂದರೆ ಏನರ್ಥ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.