ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾದ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ. ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾರಿ ಮಳೆಯಿಂದಾಗಿ ಬೆಳೆಹಾನಿಯಾಗಿ ತರಕಾರಿ, ಅಗತ್ಯವಸ್ತುಗಳ ಬೆಲೆ ಏರಿಕೆಯಾಗುವ ಬಗ್ಗೆ ನಿಗಾವಹಿಸಲಾಗಿದೆ. ಭತ್ತ ಮೊದಲಾದ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸುವ ಕುರಿತು ಸಭೆ ನಡೆಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ನಿರಂತರ ಮಳೆಯಾಗಿದೆ. ಇದರಿಂದಾಗಿ ಬೆಳೆ ಹಾನಿ ಉಂಟಾಗಿದ್ದು, ಹಾನಿ ಕುರಿತು ಸಮೀಕ್ಷೆಗೆ ಆದೇಶಿಸಲಾಗಿದೆ. ಅಕಾಲಿಕ ಮಳೆಯಿಂದ ಕೃಷಿ ನಷ್ಟ ಉಂಟಾದ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದಷ್ಟು ಬೇಗನೆ ಸಮೀಕ್ಷೆ ವರದಿ ಕೈಸೇರಲಿದ್ದು, ಶೀಘ್ರವೇ ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳೆ ಹಾನಿ ಪರಿಹಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಸಿದ್ದರಾಮಯ್ಯ ಅವರು ಪತ್ರ ಬರೆಯುವ ಮೊದಲೇ ಸರ್ಕಾರ ಸಮೀಕ್ಷೆಗೆ ಆದೇಶಿಸಿದೆ. ರೈತರ ವಿಷಯದಲ್ಲಿ ವಿಳಂಬದ ಮಾತೇ ಇಲ್ಲ. ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.