ಹಾವೇರಿ: ಹಾವೇರಿಯಲ್ಲಿ ನಡೆದ ಕನ್ನಡದ ಹಬ್ಬ ಅತ್ಯಂತ ಯಶಸ್ವಿಯಾಗಿದೆ. ಇದಕ್ಕಾಗಿ ದುಡಿದ ಎಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಸಮ್ಮೇಳನದ ಸರ್ವಾಧ್ಯಕ್ಷರಾದ ದೊಡ್ಡರಂಗೇಗೌಡರಿಗೆ ಅಭಿನಂದನೆಗಳು. ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ ಎಂದರು.
ಶ್ರೇಷ್ಠ ಸಾಹಿತ್ಯದ ಚಿಂತನೆ ಜನಸಾಮಾನ್ಯರ ಚಿಂತನೆಗಳು ಒಂದೇ. ಕನ್ನಡ ಭಾಷೆಯಲ್ಲಿ ಸ್ಪಷ್ಟತೆ, ನಿಖರತೆ ಇದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಳಸ ಬಂಡೂರಿ ಯೋಜನೆಗೆ ಈಗಾಗಲೇ ಅನುಮತಿ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದ ಜನರ ಕನಸು ನನಸಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೂ ಶೀಘ್ರವೇ ಅನುಮತಿ ಸಿಗುವ ಭರವಸೆ ಇದೆ. ಮೇಕೆದಾಟು ಯೋಜನೆ ಜಾರಿಗೂ ಸರ್ವ ಪ್ರಯತ್ನ ನಡೆದಿದೆ. ನೆಲ ಜಲ ಭಾಷೆ ವಿಚಾರ ಬಂದಾಗ ನಾವೆಲ್ಲ ಒಗ್ಗಟ್ಟಾಗಿರುತ್ತೇವೆ. ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕನ್ನಡ ಹೋರಾಟಗಾರರ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯುತ್ತೇವೆ. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಗಡಿನಾಡಿನ ಅಭಿವೃದ್ಧಿಗಾಗಿ ಪ್ರಾಧಿಕಾರಕ್ಕೆ ಈಗಾಗಲೇ 25 ಕೋಟಿ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಇನ್ನೂ 100 ಕೋಟಿರುವ ಅನುದಾನ ನೀಡುತ್ತೇವೆ ಎಂದು ಹೇಳಿದ್ದಾರೆ.