ಬೆಂಗಳೂರು: ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಆರಂಭಿಸಲಾಗುವುದು. 10 ವರ್ಷ ಪೂರ್ಣಗೊಳಿಸಿದ ಎಲ್ಲಾ ವ್ಯವಸ್ಥೆ ಇರುವ ವಸತಿ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಪಿಯುಸಿ ಆರಂಭಿಸಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ವಸತಿ ಶಾಲೆಗಳು ಗುತ್ತಿಗೆ ಆಧಾರಿತ ಕೆಲಸಗಳಿಗೆ ಸೀಮಿತಗೊಳ್ಳದೇ ಮಕ್ಕಳಿಗೆ ಮೂಲಸೌಕರ್ಯ ನೀಡಲು ಆದ್ಯತೆ ನೀಡಬೇಕು. ಅರ್ಹ ವಸತಿ ಶಾಲೆಗಳಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದ ಪಿಯುಸಿ ಶಿಕ್ಷಣ ಪ್ರಾರಂಭಿಸುವಂತೆ ಸಿಎಂ ಸೂಚಿಸಿದ್ದಾರೆ.
ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ, ಗುಣಾತ್ಮಕ ಶಿಕ್ಷಣ ನೀಡಲು ವಸತಿ ಶಾಲೆ ಆರಂಭಿಸಲಾಗಿದ್ದು, ಸರ್ಕಾರವನ್ನು ನಂಬಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಕಟ್ಟಡ ಕಟ್ಟಿದರೆ ಸಾಲದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮೂಲಸೌಕರ್ಯ ಒದಗಿಸಬೇಕು. 10 ವರ್ಷಗಳಾಗಿರುವ ಎಲ್ಲಾ ವ್ಯವಸ್ಥೆಗಳಿರುವ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಕಡ್ಡಾಯವಾಗಿ ಪಿಯುಸಿ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.