ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರು ಗ್ರಾಮಕ್ಕೆ ಭೇಟಿ ನೀಡಿ ಬಿಜೆಪಿ ಯುವ ಮುಖಂಡ ಪ್ರವೀಣ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಅವರೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನೆಟ್ಟಾರು ಗ್ರಾಮದ ಪ್ರವೀಣ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಪ್ರವೀಣ್ ಕುಟುಂಬದವರಿಗೆ ಧೈರ್ಯ ಹೇಳಿದ ಸಿಎಂ ರಾಜ್ಯ ಬಿಜೆಪಿ ಸರ್ಕಾರ ನಿಮ್ಮೊಂದಿಗಿದೆ ಎಂದು ಅಭಯ ನೀಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ ಚೆಕ್ ಹಸ್ತಾಂತರಿಸಿದ್ದಾರೆ.
ಭೇಟಿ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದು ಕೊಲೆ ಮಾತ್ರ ಅಲ್ಲ, ಇದೊಂದು ದೇಶದ್ರೋಹದ ಕೆಲಸವಾಗಿದೆ. ಅತಿ ಶೀಘ್ರವೇ ಕೊಲೆ ಆರೋಪಿಗಳ ಬಂಧನವಾಗಲಿದೆ. ಇದನ್ನು ಕೇವಲ ಒಂದು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ಪ್ರವೀಣ್ ಹತ್ಯೆ ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗಿದೆ. ನಮ್ಮ ರಾಜ್ಯದಲ್ಲಿ ವಿಶೇಷವಾಗಿ ಮಂಗಳೂರಿಗೆ ಎನ್ಐಎ ಬೇಕಿದೆ. ಪ್ರವೀಣ್ ಪ್ರಕರಣವನ್ನು ಅಗತ್ಯವಿದ್ದಲ್ಲಿ ಎನ್.ಐ.ಎ. ತನಿಖೆಗೆ ವಹಿಸುತ್ತೇವೆ. ಹತ್ಯೆಗೆ ನೆರವಾದ ಎಲ್ಲರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.