
ಬೆಳಗಾವಿ: ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲೇ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿ ಚರ್ಚೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಎನ್.ಪಿ.ಎಸ್. ರದ್ದುಪಡಿಸಬೇಕೆಂದು ಉಭಯ ಸದನಗಳಲ್ಲಿ ಪಕ್ಷಾತೀತವಾಗಿ ಒತ್ತಾಯ ಕೇಳಿ ಬಂದಿದ್ದು, ಚರ್ಚೆಗೆ ಮುಖ್ಯಮಂತ್ರಿಗಳು ಸಮಯ ಕೋರಿದ್ದಾರೆ.
ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರರು ಬೇಡಿಕೆ ಇಟ್ಟಿದ್ದಾರೆ. ವಿಧಾನ ಮಂಡಲದ ಉಭಯ ಸದನಗಳಲ್ಲಿಯೂ ಈ ಬೇಡಿಕೆ ಪ್ರತಿದ್ವನಿಸಿದ್ದು, ಇದೊಂದು ಗಂಭೀರ ವಿಚಾರವಾಗಿದ್ದು, ಸಾಧಕ ಬಾಧಕಗಳ ಸಮಗ್ರ ಚರ್ಚೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಶಾಸಕರಿಗೂ ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿ ಮಾಡಿ ಇಲ್ಲವೇ ಎಲ್ಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿ ಮಾಡಿ ಎಂದು ಒತ್ತಾಯಿಸಿದರು. ಎನ್‌ಪಿಎಸ್ ಅಮಾನವೀಯ ಪದ್ಧತಿಯಾಗಿದೆ. 2004 ರಿಂದ ಇತ್ತೀಚೆಗೆ ಕೆಲಸಕ್ಕೆ ಸೇರಿದ ನೌಕರರಿಗೆ ಅನ್ವಯವಾಗುವ ಎನ್.ಪಿ.ಎಸ್. ಸರಿಯಾಗಿಲ್ಲ. ಇತ್ತೀಚೆಗೆ ಆಯ್ಕೆಯಾದ ಶಾಸಕರು, ಸಂಸದರಿಗೆ ಮಾತ್ರ ಒಪಿಎಸ್ ಜಾರಿಯಾಗಿದೆ. ಎರಡೆರಡು ಸೇವೆ ಸಲ್ಲಿಸಿದ ಶಾಸಕರು, ಸಂಸದರಿಗೆ ಎರಡು ಪಿಂಚಣಿ ಸಿಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು, ಎನ್‌ಪಿಎಸ್ ಏಕಾಏಕಿ ರದ್ದುಪಡಿಸುವುದು ಸುಲಭವಲ್ಲ, ಇದು ಗಂಭೀರ ವಿಚಾರವಾಗಿದ್ದು ಸಾಧಕ ಬಾಧಕ ಚರ್ಚೆ ನಡೆಸಬೇಕಿದೆ. ಏಕ ಪಕ್ಷಿಯವಾಗಿ ತೀರ್ಮಾನ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ಮಾಡಿಕೊಡಲಿ ಎಂದು ಮನವಿ ಮಾಡಿದ್ದಾರೆ.