ಬೆಂಗಳೂರು: ಎನ್‌ಪಿಎಸ್ ಸರಳೀಕರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಭಾಗಶಃ ಸ್ಪಂದಿಸಿದೆ. ನಿವೃತ್ತಿಯಾದ ನಂತರ ನಿಶ್ಚಿತ ಆದಾಯ ಮೂಲದ ಖಾತರಿ ಇಲ್ಲದ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. 2006ರ ನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಪೂರ್ವನ್ವಯವಾಗಿ ಮರು ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗೆ ಸರ್ಕಾರ ಭಾಗಶಃ ಸ್ಪಂದಿಸಿದೆ.
ತನ್ನ ಒಪ್ಪಿಗೆ ಇಲ್ಲದೆ ಎನ್.ಪಿ.ಎಸ್. ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸ್ಪಷ್ಟ ನಿರ್ದೇಶನ ನೀಡಿದೆ. ಟ್ರಸ್ಟ್ ಮೂಲಕ ಷೇರುಪೇಟೆಯಲ್ಲಿ ಹೂಡಿಕೆಯಾಗಿರುವ ಎನ್.ಪಿ.ಎಸ್. ಹಣವನ್ನು ವಾಪಸ್ ಪಡೆಯುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಸಂಧಾನ ಮಾತುಕತೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್.ಪಿ.ಎಸ್.ನಲ್ಲಿ ಏನೆಲ್ಲ ಸರಳೀಕರಣ ಮಾಡಿ ನೌಕರ ಸ್ನೇಹಿಯಾಗಿ ರೂಪಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ಭರವಸೆಯಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿದೆ. ಒಪಿಎಸ್ ಜಾರಿ ಮಾಡಿರುವ ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ಜಾರ್ಖಂಡ್ ಮತ್ತು ಛತ್ತೀಸ್ಗಡ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಯಾವ ರೀತಿ ಒಪಿಎಸ್ ಜಾರಿ ಮಾಡಲಾಗಿದೆ, ಇದರಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟು ಹೊರೆ ಆಗುತ್ತದೆ ಎಂಬುದರ ಬಗ್ಗೆ ಪರಾಮರ್ಶೆ ನಡೆಸಿ ಎರಡು ತಿಂಗಳೊಳಗೆ ವರದಿ ಸಿದ್ಧಪಡಿಸಲು ಸಮಿತಿಗೆ ಸರ್ಕಾರ ಆದೇಶ ನೀಡಿದೆ.