ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ನಟ ಕಿಚ್ಚ ಸುದೀಪ್ ಸಾಥ್ ನೀಡಲಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣಕ್ಕಿಳಿಯುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮೊದಲು ಭರ್ಜರಿ ರೋಡ್ ಶೋ ನಡೆಸಲಾಗುತ್ತದೆ. ಸುದೀಪ್ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಲಿದ್ದು, ಹುಬ್ಬಳ್ಳಿಯಿಂದ ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ಅಧ್ಯಕ್ಷ ನಡ್ಡಾ ಅವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಶಿಗ್ಗಾಂವಿಗೆ ಆಗಮಿಸಲಿದ್ದಾರೆ.
ಸಂತೆ ಮೈದಾನದಿಂದ ರೋಡ್ ಶೋ ನಡೆಯಲಿದೆ. ಮಧ್ಯಾಹ್ನ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಬಹಿರಂಗ ಪ್ರಚಾರ ಸಭೆಯಲ್ಲಿ ನಾಯಕರು ಭಾಗವಹಿಸಲಿದ್ದು, ಮಧ್ಯಾಹ್ನ 1:30 ರಿಂದ 2 ಗಂಟೆ ಅವಧಿಯಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ ಸಿಎಂ ನಾಮಪತ್ರ ಸಲ್ಲಿಸಲಿದ್ದಾರೆ.