ಬೆಂಗಳೂರು: ಜಿಲ್ಲಾ ಮಟ್ಟದಲ್ಲಿ ಆಡಳಿತ ಚುರುಕುಗೊಳಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ.
ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕುರಿತಂತೆ ಮತ್ತು ಬಜೆಟ್ನಲ್ಲಿ ಘೋಷಣೆ ಮಾಡಿದ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುವ ಕುರಿತಂತೆ ಆಡಳಿತಕ್ಕೆ ಒತ್ತು ನೀಡಿ ಆಡಳಿತಯಂತ್ರ ಚುರುಕುಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಜೆ ದಿನವೂ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ವಿಧಾನಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ನಾರಾಯಣಗೌಡ, ಸುನಿಲ್ ಕುಮಾರ್, ಕೆ. ಗೋಪಾಲಯ್ಯ, ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ಬಿ.ಸಿ. ನಾಗೇಶ್ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸಿಎಂ ಬಿಸಿ ಮುಟ್ಟಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲೆಗಳಲ್ಲಿ ಕೆಲವು ಸಮಸ್ಯೆಗಳು ಆಗುತ್ತಿರುವುದನ್ನು ಗಮನಿಸಿದ್ದೇನೆ. ಆದರೆ, ಅದನ್ನು ಬಗೆಹರಿಸುವ ಕೆಲಸ ಮಾತ್ರ ನಿಮ್ಮಿಂದ ಆಗುತ್ತಿಲ್ಲ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸರ್ಕಾರಿ ಕೆಲಸ ಎನ್ನುವುದನ್ನು ಬಿಟ್ಟು ಜನರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸಬೇಕು. ದೀನದಲಿತರು, ರೈತರು, ಜನರ ಸಮಸ್ಯೆಗಳನ್ನು ಪರಿಹರಿಸಲು ವಿಳಂಬ ಮಾಡಬಾರದು. ಜನರ ಸಮಸ್ಯೆ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.