ರಾಯಚೂರು: ಕಲ್ಯಾಣ ಕರ್ನಾಟಕದ ಜನ ಗುಳೆ ಹೋಗುವುದನ್ನು ತಡೆಯಲು ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ನೀಡಲಾಗುವುದು. ಈ ನಿಟ್ಟಿನಲ್ಲಿ ಜೀನ್ಸ್ ಮತ್ತು ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ರಾಜ್ಯದಿಂದಲೂ ಗಾರ್ಮೆಂಟ್ಸ್ ಉದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು, ಕಲಬುರ್ಗಿ, ಬಳ್ಳಾರಿಯಲ್ಲಿ ಗಾರ್ಮೆಂಟ್ಸ್ ಉದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಟೆಕ್ಸ್ ಟೈಲ್ಸ್ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರಾಜ್ಯದ ಪಾಲಿನ ನೀರಿನ ಸಂಪೂರ್ಣ ಬಳಕೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿರುವ ಹಣ ಒದಗಿಸಿಕೊಡಲಾಗುವುದು ಎಂದು ಹೇಳಿದರು.