ಬೆಂಗಳೂರು: ಭಾರಿ ಮಳೆ, ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಮನೆ ಹಾಗೂ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಬಾರದು, ಕೂಡಲೇ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.
ಭಾರಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿಯೂ ಹಣ ಇದ್ದು, ತುರ್ತು ತಾತ್ಕಾಲಿಕ ಕೆಲಸಗಳ ನಿರ್ವಹಣೆಗೆ ಬಿಡುಗಡೆ ಮಾಡಿದ ಹಣ ಬಳಸಿಕೊಂಡು ನಿರ್ವಹಿಸಬೇಕು. ಮನೆ ಹಾಗೂ ಬೆಳೆ ಹಾನಿಗೆ ತಕ್ಷಣವೇ ಪರಿಹಾರ ವಿತರಿಸಬೇಕು. ಸಂತ್ರಸ್ತರ ಕಷ್ಟಗಳಿಗೆ ಸಮರೋಪಾದಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದ್ದಾರೆ.
ಕಾಳಜಿ ಕೇಂದ್ರಗಳಲ್ಲಿ ಇರುವವರಿಗೆ ಉತ್ತಮ ಗುಣಮಟ್ಟದ ಆಹಾರ ಕೊಡಬೇಕು. ಸಂಬಂಧಿಕರ ಮನೆಗೆ ತೆರಳುವ ಸಂತ್ರಸ್ತರಿಗೆ ಆಹಾರದ ಕಿಟ್ ಗಳನ್ನು ತಲುಪಿಸಬೇಕು. ಹಾನಿಗೊಳಗಾದ ವಿದ್ಯುತ್ ಕಂಬ, ವಿದ್ಯುತ್ ಸಂಪರ್ಕ, ಸೇತುವೆ, ರಸ್ತೆ, ಕೆರೆ ಏರಿಗಳ ದುರಸ್ತಿಗೆ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ.