
ಬೆಂಗಳೂರು: ರಸ್ತೆ ಸರ್ಕಾರಿ ನೌಕರರ ಜೊತೆ ಮೊದಲ ಹಂತದಲ್ಲಿ ಚರ್ಚೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೌಕರರ ಪರವಾಗಿದೆ. ನೌಕರರು ಸರ್ಕಾರದ ಭಾಗವಾಗಿದ್ದಾರೆ. ಅವರು ಮುಕ್ತವಾಗಿ ಮಾತನಾಡಿದ್ದಾರೆ. ನಾವು ಕೂಡ ಮುಕ್ತವಾಗಿ ಮಾತನಾಡಿದ್ದೇವೆ. ಕೊರೋನಾ ಸಂದರ್ಭದಲ್ಲಿ ಬೇರೆ ರಾಜ್ಯಗಳಲ್ಲಿ ವೇತನ ನೀಡಿರಲಿಲ್ಲ. ನಾವು ವೇತನ ನೀಡಿದ್ದಕ್ಕೆ ನೌಕರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಮಧ್ಯಂತರ ವರದಿ ತರಿಸಿಕೊಂಡು ಆದೇಶ ಮಾಡುವುದಾಗಿ ಹೇಳಿದ್ದೇನೆ. ಅವರು ತಮ್ಮ ಅಹವಾಲು ಹೇಳಿದ್ದಾರೆ ಕೆಲವು ಸಲಹೆಗಳನ್ನೂ ಕೊಟ್ಟಿದ್ದಾರೆ. ನಿಮ್ಮ ಸಂಘದಲ್ಲಿ ನಿರ್ಣಯ ಹೇಳಿ ನಿಮ್ಮ ನಿರ್ಣಯ ಆಧರಿಸಿ ಆನಂತರ ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮುಂದುವರೆಯುತ್ತೇವೆ. ಈಗ ನಡೆದ ಸಭೆ ಒಂದು ಹಂತಕ್ಕೆ ಬಂದಿದೆ. ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅವರು ಚರ್ಚೆ ಮಾಡುತ್ತಾರೆ. ಅದನ್ನು ನೋಡಿಕೊಂಡು ನಾವು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.