ಹಾಸನ: ಕಾಡಾನೆ ದಾಳಿಗೆ ಬಲಿಯಾದ ಕುಟುಂಬದವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡಿನಲ್ಲಿ ಅವರು ಮಾತನಾಡಿ, ಕಾಡಾನೆ ಸ್ಥಳಾಂತರ ಮಾಡಲು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಕಾಡಾನೆ ದಾಳಿಗೆ ಬಲಿಯಾಗುವ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತೇವೆ ಎಂದರು.
ಕಾಡಾನೆ ಹಾವಳಿ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಮಾನವ -ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಬರಗಾಲದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಪ್ರಾಣಿಗಳು ಹಿಂತಿರುಗಿಲ್ಲ. ಗುಂಪಿನಲ್ಲಿರುವ ಆನೆಗಳನ್ನು ಚದುರಿಸುವುದು ಕಷ್ಟ. ಆನೆಗಳು ಹೆಚ್ಚಾಗಿರುವ ಕಡೆ ನೂರಾರು ಸಿಬ್ಬಂದಿ ಸೇರಿ ಹಿಮ್ಮೆಟ್ಟಿಸಬೇಕು. ಅದಕ್ಕೆ ಬೇಕಾದಷ್ಟು ಹಣ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಪ್ರಸಕ್ತ ವರ್ಷದ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ. ಬಂಡೀಪುರದಲ್ಲಿ ಹೊಸ ರೀತಿಯ ಫೆನ್ಸಿಂಗ್ ಟ್ರಯಲ್ ಮಾಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.