ಮಂಡ್ಯ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತ್ಯಾಗದ ಮಾತುಗಳನ್ನಾಡಿದ್ದಾರೆ.
ತಮ್ಮ ಬಳಿ ಏನಿದೆ ಅದನ್ನೆಲ್ಲ ತ್ಯಾಗ ಮಾಡಬೇಕು ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಬುದ್ಧ ಎಲ್ಲವನ್ನು ಬಿಟ್ಟು ರಾತ್ರೋರಾತ್ರಿ ಮನೆಯನ್ನು ತೊರೆದ. ಇಂದು ಬುದ್ಧ ಜಯಂತಿ, ಬುದ್ಧ ನಮಗೆಲ್ಲ ಮಾದರಿ ಎಂದು ಹೇಳಿದ್ದಾರೆ.
ಯುಕೆ ಪ್ರಧಾನಿ ಕಚೇರಿಯಲ್ಲಿಯೂ ಬುದ್ಧನ ಫೋಟೋ ಇದೆ. ಬದುಕಿನಲ್ಲಿ ನೋವು, ಕಷ್ಟ, ದುಃಖ ಇದೆ. ನೋವು, ಕಷ್ಟ, ದುಃಖಕ್ಕೆ ಕಾರಣ ಆಸೆ. ಆಸೆಯನ್ನು ಮೆಟ್ಟಿ ನಿಲ್ಲಬೇಕೆಂದರೆ ತ್ಯಾಗ ಮಾಡಬೇಕು ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಂ ತ್ಯಾಗದ ಮಾತುಗಳನ್ನಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ.