
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದ್ದು, ಎಸ್.ಡಿ.ಎಂ.ಸಿ.ಗಳಿಗೆ ಶಿಕ್ಷಣ ಇಲಾಖೆಯಿಂದ ಕಾರ್ಯಾದೇಶ ಹೊರಡಿಸಲಾಗಿದೆ.
132 ಕೋಟಿ ರೂಪಾಯಿ ಮೊತ್ತದಲ್ಲಿ ಸಾಕ್ಸ್, ಶೂಗಳ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ. ಶಿಕ್ಷಣ ಇಲಾಖೆಯಿಂದ ಶಾಲಾಭಿವೃದ್ಧಿ ಸಮಿತಿಗಳಿಗೆ ಕಾರ್ಯಾದೇಶ ನೀಡಲಾಗಿದೆ.
ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ಖರೀದಿ ವಿಚಾರ ಆಡಳಿತ, ವಿಪಕ್ಷ ನಾಯಕರ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಮಕ್ಕಳು ಶೂ, ಸಾಕ್ಸ್ ಗಾಗಿ ಶಾಲೆಗೆ ಬರಲ್ಲ, ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಬರುತ್ತಾರೆ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಕಿಡಿಕಾರಿದ್ದ ಡಿ.ಕೆ.ಶಿವಕುಮಾರ್, ಭಿಕ್ಷೆ ಬೇಡಿಯಾದ್ರೂ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಿಸ್ತೀವಿ ಎಂದು ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿ ಕೋವಿಡ್ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಭಿಕ್ಷೆ ಬೇಡಿದ್ರಲ್ಲ ಆ ಹಣ ಎಲ್ಲಿ? ಎಂದು ಪ್ರಶ್ನಿಸಿದ್ದರು.
ಈಗಾಗಲೇ ರಾಜ್ಯ ಸರ್ಕಾರ ಸಮವಸ್ತ್ರ, ಶೂ, ಸಾಕ್ಸ್ ಗಾಗಿ 132 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಶೀಘ್ರದಲ್ಲಿಯೇ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ದೊರೆಯಲಿದೆ ಎಂದು ಸಿಎಂ ಹೇಳಿದ್ದು, ಈ ಬಗ್ಗೆ ಕಾರ್ಯಾದೇಶ ಹೊರಡಿಸಲಾಗಿದೆ.