ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಬಾರಿ ಹಾನಿ ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಳೆ ಹಾನಿ ಪರಿಹಾರದ ಕುರಿತು ಇಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಮಳೆ ಹಾನಿ ಸಮೀಕ್ಷೆ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಾನಿ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಲು ಸೂಚಿಸಲಾಗಿದೆ. ಒಳನಾಡು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಮಳೆಯಿಂದ ಬೆಳೆ ನಾಶ, ರಸ್ತೆ, ಸೇತುವೆ, ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಜುಲೈನಲ್ಲಿ ಮೂರು ಲಕ್ಷ ರೈತರಿಗೆ ಹಣ ಬಿಡುಗಡೆ ಮಾಡಲಾಗಿದೆ. ಡಿಬಿಟಿ ಮೂಲಕ ಹಣ ಜಮಾ ಮಾಡಲು ತಿಳಿಸಲಾಗಿದೆ ಎಂದರು.
ಜಿಲ್ಲೆಗಳಿಗೆ ಹೋಗಲು ಚುನಾವಣೆ ಆಯೋಗದ ಅನುಮತಿ ಕೇಳಲಾಗಿದೆ. ಆಯೋಗ ಒಪ್ಪಿದರೆ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಬಗ್ಗೆ ಆದಷ್ಟು ಬೇಗ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಈಗಾಗಲೇ ಎಲ್ಲ ಕಡೆ ಪ್ರಾಥಮಿಕ ಸಮೀಕ್ಷೆ ಆರಂಭಿಸಲಾಗಿದೆ. ಬೆಳೆ ಹಾನಿ ಮತ್ತು ಮಳೆಯಿಂದ ಆದ ಹಾನಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಧಿಕಾರಿಗಳು ವರದಿ ನೀಡಲಿದ್ದು, ತಕ್ಷಣವೇ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.