
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ದತ್ತ ಪೀಠಕ್ಕೆ ರೋಪ್ ವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಜಿಲ್ಲೆಯ ವಿವಿಧ ಯೋಜನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಹಾಗೂ ಸವಲತ್ತುಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ರೋಪ್ ವೇ ಗಳನ್ನು ಪ್ರಥಮ ಬಾರಿಗೆ ರಾಜ್ಯದಲ್ಲಿ ಪ್ರವಾಸಿ ತಾಣಗಳಿಗೆ ಪರಿಚಯಿಸಲು ತೀರ್ಮಾನಿಸಲಾಗಿದೆ. ಚಾಮುಂಡಿಬೆಟ್ಟ, ನಂದಿ ಬೆಟ್ಟ, ಅಂಜನಾದ್ರಿ ಬೆಟ್ಟದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಇಲ್ಲಿಗೆ ವಿಮಾನ ಸೌಲಭ್ಯ ಅಗತ್ಯವಿದೆ. ಅದಕ್ಕಾಗಿ ಏರ್ ಸ್ಟ್ರಿಪ್ ನಿರ್ಮಿಸಿ ಪ್ರವಾಸೋದ್ಯಕ್ಕೆ ಒತ್ತು ನೀಡಲಾಗುವುದು. ಹಂಪಿ, ಚಿಕ್ಕಮಗಳೂರು ಮತ್ತು ಮಡಿಕೇರಿಗಳಲ್ಲಿ ಹೆಲಿ ಪೋರ್ಟ್ ನಿರ್ಮಿಸಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಹೆಲಿಪೋರ್ಟ್ ನ್ನು ಇದೇ ವರ್ಷ ಪ್ರಾರಂಭ ಮಾಡಲಾಗುವುದು. ಗ್ರಾಮಿಣ ಪ್ರದೇಶದಲ್ಲಿ ಸಂಚಾರಿ ಆಸ್ಪತ್ರೆಯನ್ನು ನಾಲ್ಕು ಜಿಲ್ಲೆಗಳಲ್ಲಿ ಪ್ರಾರಂಭಿಸಿದ್ದು, ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯೂ ಒಂದಾಗಿದೆ ಎಂದು ತಿಳಿಸಿದರು.
ಈ ಜಿಲ್ಲೆಗೆ ಬಜೆಟ್‍ನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಭದ್ರಾ ಯೋಜನೆಯಡಿಯಲ್ಲಿ ಕಡೂರು, ಚಿಕ್ಕಮಗಳೂರು ಮತ್ತು ತರೀಕರೆಯಲ್ಲಿ 1283 ಕೊಟಿ ರೂ..ಗಳ ಕೆರೆ ತುಂಬುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಮೊದಲನೇ ಹಂತದ ಕಾಮಗಾರಿ ಪ್ರಾರಂಭವಾಗಿದೆ. 2-3 ನೇ ಹಂತಕ್ಕೆ ಇದೇ ವರ್ಷದಲ್ಲಿ ಅನುಮೋದನೆ ನೀಡಲಾಗುವುದು. ಈ ಕಾರ್ಯಕ್ರಮದಿಂದ ಮೂರು ತಾಲ್ಲೂಕುಗಳ ನೀರಿನ ಮಟ್ಟ ಉತ್ತಮವಾಗಿ ರೈತಾಪಿ ವರ್ಗಕ್ಕೆ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದರು.