ನವದೆಹಲಿ: ಬಿಜೆಪಿ ಅಧ್ಯಕ್ಷರ ನೇತೃತ್ವದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು, ಜನವರಿಯಿಂದ ಪ್ರಧಾನಿ ಮೋದಿ ಅವರ ಪ್ರವಾಸದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಮೀಸಲಾತಿ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಯಾರು ಯಾರಿಗೆ ನ್ಯಾಯ ಕೊಡಲು ಸಾಧ್ಯವಿದೆಯೋ ಅವರಿಗೆ ಕೊಡಿ ಎಂದು ಹೇಳಿದ್ದಾರೆ. ಸಾಮಾಜಿಕ ನ್ಯಾಯ ಮಾನದಂಡ ಇಟ್ಟುಕೊಂಡು ಕೊಡಿ ಎಂದು ತಿಳಿಸಿದ್ದಾರೆ. ಮೀಸಲಾತಿ ಹೋರಾಟದ ವಿವರಗಳನ್ನು ವರಿಷ್ಠರಿಗೆ ನೀಡಿದ್ದೇನೆ. ಮೀಸಲಾತಿ ನೀಡುವ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ. ಪ್ರಾಂತ್ಯವಾರು, ಜಾತಿವಾರು ಸಚಿವ ಸ್ಥಾನದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಾವೇ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ವರಿಷ್ಠರು ಹೇಳಿದ್ದಾರೆ. ಡಿಸೆಂಬರ್ 30ರಂದು ಮಂಡ್ಯದ ಕಾರ್ಯಕ್ರಮಕ್ಕೆ ಅಮಿತ್ ಶಾ ಬರಲಿದ್ದಾರೆ. ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಲಿದ್ದಾರೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.