ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಕಂತಿನ ಸಂಪುಟ ಸರ್ಜರಿ ಶೀಘ್ರದಲ್ಲೇ ನಡೆಯಲಿದೆ.
ಖಾಲಿ ಇರುವ 5 ಸ್ಥಾನಗಳನ್ನು ಭರ್ತಿ ಮಾಡಲಿದ್ದು, ಇದೇ ವೇಳೆ ಕೆಲವರಿಗೆ ಕೊಕ್ ನೀಡಿ ಮತ್ತೆ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಚಿಂತನೆ ನಡೆದಿದೆ. ಪ್ರಮುಖವಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೂ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಜನಪ್ರಿಯ ಮಂತ್ರಿ ಮಂಡಲ ರಚಿಸಲು ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ. ಪ್ರಮುಖವಾಗಿ ಈ ಬಾರಿ ಡಿಸಿಎಂ ಹುದ್ದೆ ಸೃಷ್ಟಿಸಲು ಚಿಂತನೆ ನಡೆದಿದೆ. ವೋಟ್ ಬ್ಯಾಂಕ್ ದೃಷ್ಟಿಯಿಂದ ಉಪಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸಮುದಾಯದವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಬ್ಬರಿಗೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು. ಈ ಬಾರಿಯೂ ಒಕ್ಕಲಿಗರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ, ಪಂಗಡದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಕ್ರಿಯಾಶೀಲ ಮತ್ತು ಉತ್ತಮ ಕೆಲಸ ಮಾಡುವವರನ್ನು ಸಂಪುಟಕ್ಕೆ ಸೇರಿಸಿಕೊಂಡು ಬಿಜೆಪಿ ಪರ ಜನಾಭಿಪ್ರಾಯ ಮೂಡಿಸಲು ಹೊಸ ತಂಡವನ್ನು ರಚಿಸಲಾಗುತ್ತದೆ. ಇದಕ್ಕಾಗಿ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದ್ದು, ಶೀಘ್ರವೇ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆ ಮಾಡಲಾಗುವುದು ಎಂದು ಹೇಳಲಾಗಿದೆ.