
ಬೆಂಗಳೂರು: ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆ ವರ್ಷವಾಗಿರುವುದರಿಂದ ಜನಪ್ರಿಯ ಬಜೆಟ್ ಮಂಡಿಸಲು ಸಿದ್ಧತೆ ಕೈಗೊಂಡಿದ್ದಾರೆ.
ಬಜೆಟ್ ಮಂಡನೆಗೆ ಮೊದಲು ದೇವಾಲಯಕ್ಕೆ ತೆರಳಲಿದ್ದಾರೆ. ನಾಡಿನ ಜನರ ಹೆಸರಲ್ಲಿ ಅರ್ಚನೆ ಮಾಡಿಸಲಿದ್ದಾರೆ. ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದಾರೆ. ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ಬಳಿಯ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ದೇವರ ಆಶೀರ್ವಾದ ಪಡೆದು ಆಯವ್ಯಯ ಮಂಡಿಸಲಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರ ಬಜೆಟ್ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ಮಡಿವಾಳ, ಗಾಣಿಗ, ನೇಕಾರ, ಕುಂಬಾರ, ಅಕ್ಕಸಾಲಿಗ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗ ಜಾರಿಗೆ ಅನುದಾನ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡುವ ಸಾಧ್ಯತೆ ಇದೆ. ನಮ್ಮ ಕ್ಲಿನಿಕ್ ಗಳನ್ನು ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಸ್ಥಾಪನೆ ಮಾಡುವ ಸಾಧ್ಯತೆ ಇದೆ.
ಮಹಿಳಾ ಸಂಘಗಳಿಗೆ ಸ್ತ್ರೀಶಕ್ತಿ ಯೋಜನೆ ಅಡಿ 5 ಲಕ್ಷ ರೂಪಾಯಿ ಹಂಚಿಕೆ, ಸ್ವಸಹಾಯ ಸಂಘಗಳ ಬಡ್ಡಿ ಅಥವಾ ಸಾಲ ಮನ್ನಾ ಮಾಡುವ ಸಾಧ್ಯತೆ ಇದೆ. ಪ್ರಾಥಮಿಕ ಶಿಕ್ಷಣದಲ್ಲೂ ಎನ್ಇಪಿ ಅನುಷ್ಠಾನಗೊಳಿಸುವುದು, ಎಂಟರಿಂದ ಹತ್ತು ಸಾವಿರ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡುವ ಸಾಧ್ಯತೆ ಇದೆ. 15,000 ಶಿಕ್ಷಕರ ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.