ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಕುಟುಂಬ ನಿರ್ವಹಣೆಗಾಗಿ ಮಹಿಳೆಯರ ಖಾತೆಗೆ ಹಣ ನೀಡುವುದಾಗಿ ಹೇಳಿದ್ದು, ಇದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದೆ.
ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಮಾಸಿಕ 2000 ರೂ. ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿರುವ ಕಾಂಗ್ರೆಸ್ ಇಂದು ಎರಡನೆಯ ಭರವಸೆಯಾಗಿ ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಮಾಸಿಕ 2,000 ರೂ. ನೀಡುವುದಾಗಿ ಘೋಷಣೆ ಮಾಡಲಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ‘ನಾ ನಾಯಕಿ’ ಮಹಿಳಾ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿಯವರ ಮೂಲಕ ಇದನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. 18 ವರ್ಷ ಮೇಲ್ಪಟ್ಟ ನಿರುದ್ಯೋಗಿ ಯುವತಿಯರಿಗೆ ಮಾಸಿಕ 2000 ರೂಪಾಯಿ ಭತ್ಯೆ ನೀಡಲು ಕಾಂಗ್ರೆಸ್ ಇಂದು ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.