ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿನ್ನೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಳೆನೀರು ನುಗ್ಗಿದ ಮನೆಗಳಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಮಳೆಗೆ ಬಲಿಯಾದ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಮತ್ತು ಮಳೆನೀರು ನುಗ್ಗಿ ಹಾನಿಗೀಡಾದ ಕುಟುಂಬಗಳಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇಂದು ಕೂಡ ಮುಖ್ಯಮಂತ್ರಿಗಳು ಸಚಿವರೊಂದಿಗೆ ನಗರದ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುವರು. ಮಳೆಹಾನಿ ಸಂಬಂಧ ಸ್ಥಳೀಯರಿಂದ ಸಿಎಂ ಮಾಹಿತಿ ಪಡೆಯಲಿದ್ದಾರೆ. ಬೆಳಗ್ಗೆ 9.30 ಕ್ಕೆ ಮನೆಯಿಂದ ಹೊರಟು ಜೆಸಿ ನಗರ, ಕಮಲಾನಗರ, ನಾಗವಾರ ಮೆಟ್ರೋ ನಿಲ್ದಾಣ, ಹೆಚ್.ಬಿ.ಆರ್. ಲೇಔಟ್, ಹೆಬ್ಬಾಳ ಸ್.ಟಿ.ಬಿ. ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.