ಹಾಸನ: ಬೇಲೂರಿನ ಕ್ಲಬ್ ನಲ್ಲಿ ದುರ್ವರ್ತನೆ ತೋರಿದ ಆರೋಪದ ಮೇಲೆ ಇಬ್ಬರು ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೇತಾ ಆದೇಶ ಹೊರಡಿಸಿದ್ದಾರೆ.
ಬೇಲೂರು ಠಾಣೆಯ ಇನ್ ಸ್ಪೆಕ್ಟರ್ ಸುಬ್ರಹ್ಮಣ್ಯ, ಹಳೇಬೀಡು ಸರ್ಕಲ್ ಇನ್ ಸ್ಪೆಕ್ಟರ್ ಜಯರಾಮ್. ಬೇಲೂರು ಸಬ್ ಇನ್ ಸ್ಪೆಕ್ಟರ್ ಪ್ರವೀಣ್ ಅಮಾನತುಗೊಂಡವರು. ಸೆ. 3ರಂದು ಬೇಲೂರಿನ ಪ್ಲಾಂಟರ್ಸ್ ಕ್ಲಬ್ ನಲ್ಲಿ ಪಾರ್ಟಿ ಮಾಡಿದ್ದ ಮೂವರು ಪೊಲೀಸ್ ಅಧಿಕಾರಿಗಳು ಊಟದ ನಂತರ ಕ್ಲಬ್ ಸಿಬ್ಬಂದಿಯೊಂದಿಗೆ ದರ್ಪ ತೋರಿ ಬೆದರಿಕೆ ಹಾಕಿದ್ದರು. ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು.
ಮೂವರು ಪೋಲಿಸ್ ಅಧಿಕಾರಿಗಳು ಸಂಜೆ 4 ಗಂಟೆ ವೇಳೆಗೆ ಪಾರ್ಟಿ ಮಾಡಲು ಕ್ಲಬ್ ಗೆ ತೆರಳಿದ್ದು, ಹೊರಗಿನಿಂದ ಆಹಾರ ಕೊಂಡೊಯ್ದಿದ್ದಾರೆ. ಇದನ್ನು ಕ್ಲಬ್ ಸಿಬ್ಬಂದಿ ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ. ಪಾನಮತ್ತರಾಗಿದ್ದ ಪೋಲಿಸ್ ಅಧಿಕಾರಿಗಳು ದುರ್ವರ್ತನೆ ತೋರಿದ್ದಾರೆ ಎಂದು ಕ್ಲಬ್ ಸಿಬ್ಬಂದಿ ದೂರು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ದುರ್ವರ್ತನೆಗೆ ಸಂಬಂಧಿಸಿದಂತೆ ಕ್ಲಬ್ ಮಾಲೀಕರು ಅರಸೀಕೆರೆ ಡಿವೈಎಸ್ಪಿ ಲೋಕೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಡಿವೈಎಸ್ಪಿ ನೇತೃತ್ವದ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ದೃಶ್ಯಾವಳಿ ಪಡೆದು ಎಸ್‌ಪಿ ಗಮನಕ್ಕೆ ತಂದಿದ್ದಾರೆ. ತನಿಖೆ ಆಧರಿಸಿ ಮೂವರು ಪೊಲೀಸ್ ಅಧಿಕಾರಿಗಳನ್ನು ಎಸ್ಪಿ ಮೊಹಮ್ಮದ್ ಸುಜೇತಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.