ಬೆಂಗಳೂರು: ಸಿಸಿಬಿ ಪೊಲೀಸರು ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ಅವರನ್ನು ಬಂಧಿಸಿದ್ದಾರೆ. ಬಂಧಿತ ಅಶೋಕ್ ಕುಮಾರ್ ಗೆ 10 ದಿನ ಸಿಸಿಬಿ ಕಸ್ಟಡಿಗೆ ವಹಿಸಿ ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ ನಿಂದ ಆದೇಶ ನೀಡಲಾಗಿದೆ.
ರಮೇಶ್ ಎಂಬವರು ದೂರು ನೀಡಿದ ದೂರಿನ ಮೇರೆಗೆ ಅಡಿಗ ಅವರನ್ನು ಬಂಧಿಸಲಾಗಿದೆ. ಇಸ್ಪೀಟ್ ಕ್ಲಬ್ ನಡೆಸುವ ವಿಚಾರಕ್ಕೆ ರಮೇಶನಿಗೆ ಧಮಕಿ ಹಾಕಿದ್ದಲ್ಲದೇ, ಪಿಸ್ತೂಲು ತೋರಿಸಿ ಬೆದರಿಸಿ 50 ಸಾವಿರ ರೂಪಾಯಿ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ.
ಇಸ್ಪೀಟ್ ಕ್ಲಬ್ ಮಾಲೀಕರೊಂದಿಗೆ ಸಭೆ ನಡೆಸಿ ಧಮಕಿ ಹಾಕಿದ್ದು, ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್ ನಲ್ಲಿ ಅಡಿಗ ಸಭೆ ನಡೆಸಿದ್ದು, ತನ್ನ ಹೆಸರಿನಲ್ಲಿ ಕ್ಲಬ್ ಇದ್ದರೆ ಯಾವುದೇ ಪೊಲೀಸರು ದಾಳಿ ಮಾಡುವುದಿಲ್ಲ. ಇದಕ್ಕಾಗಿ ನೀವು ಪ್ರತಿ ತಿಂಗಳು 50 ಸಾವಿರ ರೂಪಾಯಿ ನೀಡಬೇಕೆಂದು ಹೇಳಿದ್ದು, ಇದಕ್ಕೆ ರಮೇಶ ಹಾಗೂ ಶ್ರೀನಿವಾಸ ಎಂಬುವವರು ಒಪ್ಪಿರಲಿಲ್ಲ. ತನ್ನ ಸಹಕಾರ ಇಲ್ಲದೆ ಹೇಗೆ ಕ್ಲಬ್ ನಡೆಸುತ್ತಿರಾ ಎಂದು ಧಮಕಿ ಹಾಕಿದ್ದ ಅಡಿಗ ಪಸ್ತೂಲ್ ತೋರಿಸಿ ಮುಚ್ಚಿಸುವುದಾಗಿ ಹೇಳಿ ಹಣ ವಸೂಲಿ ಮಾಡಿದ್ದಾಗಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ರಮೇಶ್ ದೂರು ದಾಖಲಿಸಿದ್ದರು.