ಮಸಾಲೆ ಪದಾರ್ಥಗಳಲ್ಲಿ ಅದರಲ್ಲೂ ಮುಖ್ಯವಾಗಿ ಪಲಾವ್, ಬಿರಿಯಾನಿ, ಕುರ್ಮಗಳಲ್ಲಿ ಬಳಸಲಾಗುವ ಲವಂಗದ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ. ಕೊರೊನಾ ಬಂದ ಬಳಿಕ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ತಯಾರಿಸುವ ವೇಳೆ ಪ್ರತಿಯೊಬ್ಬರೂ ಲವಂಗ ಅಥವಾ ಲವಂಗದ ಪುಡಿಯನ್ನು ಬಳಸುತ್ತಿದ್ದಾರೆ.
ಹಲ್ಲುನೋವು ಹೆಚ್ಚಿದಾಗ ಒಂದು ಲವಂಗವನ್ನು ಜಜ್ಜಿ ನೋವಿರುವ ಜಾಗದಲ್ಲಿ ಇಟ್ಟರೆ ನೋವು ಕಡಿಮೆಯಾಗುತ್ತದೆ. ಇದರ ಎಣ್ಣೆಯ ಒಂದು ಹನಿಯನ್ನು ನೀರು ಅಥವಾ ಇತರ ಪಾನೀಯದೊಂದಿಗೆ ಬೆರೆಸಿ ಕುಡಿದರೆ ದೇಹಾಯಾಸ ಕಡಿಮೆಯಾಗುತ್ತದೆ.
ಮನೆಯ ಮೂಲೆಯ ತೂತಿನಿಂದ ಹೊರಬರುವ ಇರುವೆಗಳಿಗೂ ಲವಂಗದ ಎಣ್ಣೆ ಹೇಳಿ ಮಾಡಿಸಿದ ಮದ್ದು. ಇದನ್ನು ಮನೆಯ ಮೂಲೆ ಮೂಲೆಗಳಿಗೆ, ತೂತು ಇರುವಲ್ಲಿಗೆ ಸಿಂಪಡಿಸಿದರೆ ಸಾಕು, ಆ ವಾಸನೆಗೆ ಇರುವೆ ಸೇರಿದಂತೆ ಇತರ ಕ್ರಿಮಿ ಕೀಟಗಳು ಹತ್ತಿರವೂ ಬರುವುದಿಲ್ಲ.
ಫ್ಲಾಸ್ಕಿನ ವಾಸನೆ ಹೋಗದಿದ್ದಾಗ ಅದಕ್ಕೆ ಕುದಿಸಿದ ಲವಂಗದ ನೀರನ್ನು ಹಾಕಿ ಒಂದು ಗಂಟೆ ಹೊತ್ತು ಮುಚ್ಚಿಡಿ. ಬಳಿಕ ತೊಳೆಯುವುದರಿಂದ ಅದರ ದುರ್ವಾಸನೆ ದೂರವಾಗುವುದು ಮಾತ್ರವಲ್ಲ, ಫ್ಲಾಸ್ಕ್ ಸ್ವಚ್ಛಗೊಂಡಿರುತ್ತದೆ.