ಮಳೆಗಾಲದಲ್ಲಿ ತೆಗೆದಿಟ್ಟಿರುವ ಉಡುಪು ಕೆಟ್ಟ ವಾಸನೆ ಬರುವುದು ಸಹಜ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದು ನಿಮಗೆ ಗೊತ್ತೇ..?
ಮಳೆಗಾಲದಲ್ಲಿ ತೇವಾಂಶ ಹೆಚ್ಚುವುದರಿಂದ ಶಿಲೀಂಧ್ರಗಳ ಸಮಸ್ಯೆ ಹೆಚ್ಚುತ್ತದೆ. ಎಲ್ಲಾ ವಸ್ತುಗಳನ್ನು ಆಗಾಗ ತೆಗೆದು ಸ್ವಚ್ಛ ಮಾಡಿ ಮತ್ತೆ ತೆಗೆದಿಡುವುದು ಒಳ್ಳೆಯದು. ಕಪಾಟುಗಳ ಅಡ್ಡಹಲಗೆಗಳ ಮೇಲೆ ವೃತ್ತಪತ್ರಿಕೆಗಳನ್ನು ಇರಿಸಿ. ಇದನ್ನು ಮಡಚಿ ವಸ್ತ್ರ ನೇರವಾಗಿ ಕಪಾಟಿಗೆ ತಾಕದಂತೆ ಇಡಿ.
ಉಪ್ಪು ತೇವಾಂಶವನ್ನು ಬಲು ಬೇಗ ಹೀರಿಕೊಳ್ಳುತ್ತದೆ. ಚಿಕ್ಕ ಕವರ್ ನಲ್ಲಿ ಕಲ್ಲುಪ್ಪು ಹಾಕಿ ಬಟ್ಟೆಗಳ ಬದಿಗಳಲ್ಲಿಡಿ. ಕಲ್ಲುಪ್ಪು ಸಿಗದೆ ಇದ್ದರೆ ಬರೆಯುವ ಚಾಕ್ ಪೀಸ್ ಅನ್ನೂ ಇಡಬಹುದು.
ಕರ್ಪೂರವನ್ನೂ ಇದೇ ರೀತಿ ಬಳಸಬಹುದು. ತೆಳುವಾದ ಬಟ್ಟೆಯಲ್ಲಿ ಕರ್ಪೂರದ ಮಾತ್ರೆಗಳನ್ನು ಕಟ್ಟಿ ಬಟ್ಟೆಯ ಮೇಲಿಟ್ಟುಬಿಡಿ. ಇದು ತೇವಾಂಶ ಹೀರಿಕೊಳ್ಳುವ ಜೊತೆಗೆ ಬಟ್ಟೆಗೆ ಉತ್ತಮ ಪರಿಮಳವನ್ನು ನೀಡುತ್ತದೆ. ಇದು ಬಹುಬೇಗ ಕರಗುವುದರಿಂದ ವಾರಕ್ಕೊಮ್ಮೆ ಇಲ್ಲವೇ ಹದಿನೈದು ದಿನಕ್ಕೊಮ್ಮೆ ಕರ್ಪೂರ ಬದಲಾಯಿಸುತ್ತಿರಬೇಕಾದೀತು.
ಕಹಿಬೇವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಸಣ್ಣ ಬಟ್ಟೆಯ ತುಂಡಿನಲ್ಲಿ ಕಟ್ಟಿ ನಿಮ್ಮ ಕಪಾಟಿನ ಬದಿಯಲ್ಲಿಟ್ಟರೂ ಸಾಕು ಇದು ತೇವಾಂಶವನ್ನು ಹೀರಿಕೊಳ್ಳುವುದು ಮಾತ್ರವಲ್ಲ ಸೂಕ್ಷ್ಮ ಜೀವಿಗಳು ಒಳಗೆ ಬರದಂತೆಯೂ ನೋಡಿಕೊಳ್ಳುತ್ತದೆ.