ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಮಾಸ್ಕ್ ದೊಡ್ಡ ಅಸ್ತ್ರಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಅನೇಕ ಮಾಸ್ಕ್ ಲಭ್ಯವಿದೆ. ಅನೇಕರು ಸರ್ಜಿಕಲ್ ಮಾಸ್ಕ್ ಧರಿಸಿದ್ರೆ, ಮತ್ತೆ ಕೆಲವರು ಬಟ್ಟೆಯ ಮಾಸ್ಕ್ ಧರಿಸುತ್ತಾರೆ. ಬಟ್ಟೆ ಮಾಸ್ಕ್ ಬಗ್ಗೆ ಈಗ ಹೊಸ ಸಂಶೋಧನೆಯೊಂದು ನಡೆದಿದೆ.
ಸರ್ಜಿಕಲ್ ಮಾಸ್ಕ್ ನಂತೆ ಬಟ್ಟೆ ಮಾಸ್ಕ್ ಬೇಗ ಹಾಳಾಗುವುದಿಲ್ಲ. ಅದನ್ನು ಒಂದೆರಡು ಬಳಕೆ ನಂತ್ರ ಎಸೆಯುವ ಅಗತ್ಯವಿಲ್ಲ. ಒಂದು ವರ್ಷದವರೆಗೆ ಬಟ್ಟೆ ಮಾಸ್ಕ್, ಕೊರೊನಾ ಬರದಂತೆ ತಡೆಯುವ ಶಕ್ತಿ ಹೊಂದಿರುತ್ತದೆ. ಬಟ್ಟೆ ಮಾಸ್ಕನ್ನು ಪದೇ ಪದೇ ತೊಳೆಯುತ್ತೇವೆ. ಬಿಸಿಲಿನಲ್ಲಿ ಒಣಗಿಸುತ್ತೇವೆ. ಆದ್ರೂ ಬಟ್ಟೆ ಮಾಸ್ಕ್, ಸೋಂಕನ್ನು ಉಂಟುಮಾಡುವ ಕಣಗಳನ್ನು ಶೋಧಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದಿಲ್ಲ.
ಏರೋಸಾಲ್ ಅಂಡ್ ಏರ್ ಕ್ವಾಲಿಟಿ ರಿಸರ್ಚ್ ಸಂಶೋಧನಾ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಯು ಹಿಂದಿನ ಅಧ್ಯಯನವನ್ನು ಉಲ್ಲೇಖಿಸಿದೆ. ಸರ್ಜಿಕಲ್ ಮಾಸ್ಕ್ ಮೇಲೆ ಬಟ್ಟೆಯ ಮಾಸ್ಕ್ ಹಾಕುವುದು ಹೆಚ್ಚು ಸುರಕ್ಷಿತವೆಂದು ಹೇಳಲಾಗಿದೆ. ಜನಸಾಮಾನ್ಯನಿಗೆ ಮಾತ್ರವಲ್ಲ ಪರಿಸರಕ್ಕೂ ಇದು ಒಳ್ಳೆಯದು.
ಕೊರೊನಾ ಆರಂಭದಿಂದಲೂ ಮಾಸ್ಕ್ ದೊಡ್ಡ ತ್ಯಾಜ್ಯವಾಗಿದೆ. ಈವರೆಗೆ ಪ್ರತಿದಿನ ಸುಮಾರು 7,200 ಟನ್ ವೈದ್ಯಕೀಯ ತ್ಯಾಜ್ಯ ಬರ್ತಿದೆ. ಒಂದೇ ಬಾರಿ ಬಳಸಿದ ಮಾಸ್ಕ್ ಕೂಡ ತ್ಯಾಜ್ಯ ಸೇರುತ್ತಿದೆ. ಇದೆಲ್ಲವನ್ನು ಗಮನಿಸಿದ ಸಂಶೋಧಕರು, ಬಟ್ಟೆ ಮಾಸ್ಕ್ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಬಟ್ಟೆ ಮಾಸ್ಕ್ ಪದೇ ಪದೇ ತೊಳೆದು, ಒಣಗಿಸಿ ಪರೀಕ್ಷೆ ಮಾಡಿದ್ದಾರೆ. ಪ್ರತಿ ಬಾರಿ ಬಟ್ಟೆ ಮಾಸ್ಕ್ ತೊಳೆದ ನಂತ್ರವೂ ಅದ್ರ ಪರೀಕ್ಷೆ ಮಾಡಿದ್ದಾರೆ.
ಹತ್ತಿ ಬಟ್ಟೆಯ ಮಾಸ್ಕ್ 0.3 ಮೈಕ್ರಾನ್‌ಗಳ ಶೇಕಡಾ 23ರಷ್ಟು ಸೂಕ್ಷ್ಮ ಕಣಗಳನ್ನು ಶೋಧಿಸಲು ಸಾಮರ್ಥ್ಯ ಹೊಂದಿದೆ. ಸರ್ಜಿಕಲ್ ಮಾಸ್ಕ್ ಮೇಲೆ ಬಟ್ಟೆ ಮಾಸ್ಕ್ ಹಾಕಿದಲ್ಲಿ ಈ ಸಾಮರ್ಥ್ಯ ಶೇಕಡಾ 40ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.