ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಬಹುತೇಕ ಜನರು ಈ ವಿಚಾರವನ್ನು ಒಪ್ಪಿಕೊಂಡು ಸಹಿಸಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎನ್ನುವ ಮಟ್ಟ ತಲುಪಿಬಿಟ್ಟಿದ್ದೇವೆ.
ಹಿಟ್ಟಿನಿಂದ ಕಾಳುಗಳವರೆಗೂ, ಹಣ್ಣುಗಳಿಂದ ತರಕಾರಿಗಳವರೆಗೂ ಹೆಚ್ಚು ಲಾಭ ಮಾಡುವ ದುರಾಸೆಯಲ್ಲಿ ಕೆಲ ವರ್ತಕರು ಕಲಬೆರಕೆಗೆ ಮುಂದಾಗುವುದು ಸರ್ವೇ ಸಾಮಾನ್ಯವಾಗಿದೆ.
ಇಂಥದ್ದೇ ಒಂದು ನಿದರ್ಶನದ ವಿಡಿಯೋ ಟ್ವಿಟರ್ ಹಾಗೂ ಲಿಂಕ್ಡಿನ್‌ನಲ್ಲಿ ವೈರಲ್ ಆಗಿದೆ. ಬಾಡಿ ಹೋದ ಕೊತ್ತಂಬರಿ ಸೊಪ್ಪಿಗೆ ರಾಸಾಯನಿಕದಲ್ಲಿ ಅದ್ದಿ ಕೆಲವೇ ಕ್ಷಣಗಳಲ್ಲಿ ಮತ್ತೆ ಅರಳುವಂತೆ ಮಾಡಬಹುದು ಎಂದು ವ್ಯಕ್ತಿಯೊಬ್ಬರು ತೋರುತ್ತಿರುವ ವಿಡಿಯೋ ಇದಾಗಿದೆ.
ಸಾಮಾಜಿಕ ಕಾರ್ಯಕರ್ತ ಅಮಿತ್ ತಂಡಾನಿ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಒಂದೇ ನಿಮಿಷದಲ್ಲಿ ಹೀಗೆ ಸೊಪ್ಪು ತರಕಾರಿಗಳನ್ನು ಫ್ರೆಶ್ ಆಗಿ ಕಾಣುವಂತೆ ಮಾಡಬಲ್ಲ ಇಂಥ ಕರಾಮತ್ತುಗಳ ಕಾರಣದಿಂದಲೇ ಇಂದಿನ ದಿನಗಳಲ್ಲಿ ಅನಾರೋಗ್ಯ ಹೆಚ್ಚುತ್ತಲೇ ಸಾಗಿದೆ ಎಂದು ಕ್ಯಾಪ್ಷನ್‌ನಲ್ಲಿ ಹೇಳಲಾಗಿದೆ.
ಈ ವಿಡಿಯೋಗೆ 4.68 ಲಕ್ಷ ವೀಕ್ಷಣೆಗಳು ಸಿಕ್ಕಿದ್ದು, ವರ್ತಕರು ಹೇಗೆಲ್ಲಾ ಇಂಥ ಅಪಾಯಕಾರಿ ಟ್ರಿಕ್‌ಗಳನ್ನು ಮಾಡುವ ಮೂಲಕ ತಮಗೆ ವಂಚನೆಯೆಸಗುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.