ರಾಜಸ್ಥಾನದ ನಗೌರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 55 ವರ್ಷದ ಗುಮಾಸ್ತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಯ ಕಿರುಕುಳದಿಂದ ನೊಂದು ಅವರು ಈ ಕ್ರಮ ಕೈಗೊಂಡಿದ್ದಾರೆ. ಗುರುವಾರ ಪಿಲ್ವಾ ಪ್ರದೇಶದ ಶಾಲೆಯಲ್ಲಿ ಗುಮಾಸ್ತ ರಾಮ್‌ಸುಖ್ ಮೇಘವಾಲ್ ಆತ್ಮಹತ್ಯೆಗೆ ಯತ್ನಿಸಿದ್ದು, ಶುಕ್ರವಾರ ತೀವ್ರ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ. 80 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಗುರುವಾರ ಅಜ್ಮೀರ್‌ನ ಜೆಎಲ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪಿಲ್ವಾ ಸ್ಟೇಷನ್ ಹೌಸ್ ಆಫೀಸರ್ ಸೂರಜ್ಮಲ್ ಚೌಧರಿ ತಿಳಿಸಿದ್ದಾರೆ.
ಶಾಲೆಯ ಆವರಣದಲ್ಲಿ ಮೇಘವಾಲ್ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಸೀಮಾ ಚಾಂಡೇಲ್ ಮತ್ತು ಇತರ ಸಿಬ್ಬಂದಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ(ಮಕ್ರಾನಾ) ರವಿರಾಜ್ ಸಿಂಗ್ ತಿಳಿಸಿದ್ದಾರೆ.
ಗುಮಾಸ್ತರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಾಂಶುಪಾಲರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಣ ಇಲಾಖೆ ಪ್ರಾಂಶುಪಾಲರಾದ ಸೀಮಾ ಚಾಂಡೇಲ್ ಮತ್ತು ಮತ್ತೊಬ್ಬ ಶಿಕ್ಷಕಿಯನ್ನು ಅಮಾನತುಗೊಳಿಸಿದೆ.