ಮೀರತ್: ಅತಿದೊಡ್ಡ ಮತಾಂತರ ಸಿಂಡಿಕೇಟ್ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಮಂಗಳವಾರ ಮೀರತ್‌ನ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದಿಕಿಯನ್ನು ಬಂಧಿಸಿದೆ.
ಉತ್ತರ ಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಪ್ರಕಾರ, ಎಟಿಎಸ್ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೌಲಾನಾ ಕಲೀಂ ಸಿದ್ದಿಕಿ ಅವರನ್ನು ಬಂಧಿಸಿದೆ. ಈ ವರ್ಷದ ಆರಂಭದಲ್ಲಿ, ಉಮರ್ ಗೌತಮ್ ನನ್ನು ಉತ್ತರ ಪ್ರದೇಶ ಪೊಲೀಸರು ಕನ್ವರ್ಷನ್ ರಾಕೆಟ್ ನಡೆಸಿದ್ದಕ್ಕಾಗಿ ಬಂಧಿಸಿದ್ದರು.
ಮೌಲಾನಾ ಕಲೀಂ ಸಿದ್ದಿಕಿ ಉತ್ತರ ಪ್ರದೇಶದ ಮುಜಾಫರ್ ನಗರದವ ಎಂದು ಎಟಿಎಸ್ ವಕ್ತಾರರು ಹೇಳಿದ್ದಾರೆ. ಮೌಲಾನಾ ಕಲೀಂ ಸಿದ್ದಿಕಿ ಕಳೆದ ವರ್ಷ ಸನಾ ಖಾನ್ ಮತ್ತು ಗುಜರಾತ್ ಮೂಲದ ಧಾರ್ಮಿಕ ವಿದ್ವಾಂಸ ಮುಫ್ತಿ ಅನಸ್ ಸೈಯದ್ ವಿವಾಹದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಮುಫ್ತಿ ಅನಸ್ ಸಯ್ಯದ್ ನವೆಂಬರ್ 29, 2020 ರಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊದ ಶೀರ್ಷಿಕೆಯು ಮೌಲಾನಾ ಕಲೀಂ ಸಿದ್ದಿಕಿ ಅವರ ನಿಕಾಹ್‌ನಲ್ಲಿ ಇರುವುದನ್ನು ದೃಢಪಡಿಸಿದೆ.
ಎಟಿಎಸ್ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೌಲಾನಾ ಕಲೀಂ ಸಿದ್ದಿಕಿ ಅವರನ್ನು ಬಂಧಿಸಿದೆ. ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ನೆಪದಲ್ಲಿ ಸಿದ್ದಿಕಿ ಅಕ್ರಮ ಮತಾಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಜನರಿಗೆ ಬೆದರಿಕೆ ಹಾಕುವುದು ಮಾತ್ರವಲ್ಲದೆ ದಾರಿ ತಪ್ಪಿಸುತ್ತಿದ್ದ ಎಂಬ ಆರೋಪವೂ ಈತನ ಮೇಲಿದೆ.
ಮೌಲಾನಾ ಕಲೀಂ ಸಿದ್ದಿಕಿಯ ಟ್ರಸ್ಟ್ ಬಹರೇನ್‌ನಿಂದ 1.5 ಕೋಟಿ ಸೇರಿದಂತೆ ವಿದೇಶಿ ಧನಸಹಾಯದಲ್ಲಿ 3 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದ ತನಿಖೆಗಾಗಿ ಆರು ಎಟಿಎಸ್ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 20 ರಂದು ಮುಫ್ತಿ ಖಾಜಿ ಜಹಾಂಗೀರ್ ಆಲಂ ಕಾಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ನನ್ನು ದೆಹಲಿಯ ಜಾಮಿಯಾ ನಗರದಿಂದ ಬಂಧಿಸಲಾಗಿದೆ. ಕಿವುಡ-ಮೂಕ ವಿದ್ಯಾರ್ಥಿಗಳನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಪಾಕಿಸ್ತಾನದ ಐಎಸ್ಐ ನಿಂದ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ತನಿಖೆಗೆ ಸಂಬಂಧಿಸಿದಂತೆ ಎಟಿಎಸ್ ಇದುವರೆಗೆ ಸಿದ್ದಿಕಿ ಹೊರತುಪಡಿಸಿ 10 ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತಾಂತರಕ್ಕೆ ವಿದೇಶಿ ಮೂಲದಿಂದ ದೊಡ್ಡ ಪ್ರಮಾಣದಲ್ಲಿ ಧನಸಹಾಯ ಬಂದಿದೆ. ಅಕ್ರಮ ಮತಾಂತರವನ್ನು ಯೋಜಿತ ಮತ್ತು ಸಂಘಟಿತ ರೀತಿಯಲ್ಲಿ ನಡೆಸಲಾಗುತ್ತಿತ್ತು ಮತ್ತು ಅನೇಕ ಪ್ರಸಿದ್ಧ ಸಂಸ್ಥೆಗಳು ಇದರಲ್ಲಿ ತೊಡಗಿಕೊಂಡಿವೆ.
ಸಿದ್ದಿಕಿ ಜಾಮಿಯಾ ಇಮಾಮ್ ವಲಿಯುಲ್ಲಾ ಟ್ರಸ್ಟ್ ಅನ್ನು ನಡೆಸುತ್ತಿದ್ದು, ಇದು ಕೋಮು ಸೌಹಾರ್ದತೆ ಕಾರ್ಯಕ್ರಮಗಳ ನೆಪದಲ್ಲಿ ಅಕ್ರಮ ಧಾರ್ಮಿಕ ಮತಾಂತರಗಳನ್ನು ನಡೆಸಲಾಗುತ್ತಿತ್ತು ಎಂದು ಅಧಿಕಾರಿ ಹೇಳಿದ್ದಾರೆ.