ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸರ್ಕಾರ ಬೀಟ್ ವ್ಯವಸ್ಥೆ ಜಾರಿಗೆ ತಂದಿದ್ದು, ಇದರ ಮುಂದುವರೆದ ಭಾಗವಾಗಿ ಸರ್ಕಾರಿ ದಾರಿಗಳ ಒತ್ತುವರಿ ತೆರವು ಮಾಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸರ್ಕಾರಿ ದಾರಿ ಒತ್ತುವರಿಯಾಗಿರುವ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿವೆ. ನಕಾಶೆಯಲ್ಲಿರುವ ದಾರಿಗಳು ಒತ್ತುವರಿಯಾಗಿದ್ದರೆ ಅದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇಂತಹ ರಸ್ತೆಗಳ ತೆರವಿಗೆ ಅಧಿಕಾರಿಗಳು ಯಾವುದೇ ನೆಪ ಹೇಳವಂತಿಲ್ಲ. ದಾರಿಗೆ ಅಲ್ಲದೇ ರೂಢಿಗತ ರಸ್ತೆ ಇದ್ದರೂ ಕೂಡ ಕೃಷಿ ಚಟುವಟಿಕೆಗೆ ಹೋಗಿ ಬರುವವರಿಗೆ ಯಾವುದೇ ಅಡ್ಡಿ ಮಾಡುವಂತಿಲ್ಲ. ಅಡ್ಡಿ ಮಾಡಿದಲ್ಲಿ ಅಂತಹವರ ವಿರುದ್ಧ ಪೋಲಿಸ್ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಭೂಮಿಯಲ್ಲಿ ಸಣ್ಣ ರೈತರು ಸಾಗುವಳಿ ಮಾಡಿಕೊಂಡು ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಭೂಮಿ ತರವು ಮಾಡಿಸುವುದಿಲ್ಲ. ಒತ್ತುವರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ ತೆರವುಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ. ಯಾವುದೇ ಆತಂಕ ಬೇಡ ಎಂದು ಹೇಳಿದ ಸಚಿವರು ಬೇರೆ ರೀತಿಯ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.