ಅಡುಗೆ ಮನೆಯ ಬಟ್ಟೆ ಅತಿ ಹೆಚ್ಚು ಬಾರಿ ಬಳಕೆಯಾಗುತ್ತದೆ. ಚಹಾ ಸೋಸುವಾಗ ಚೆಲ್ಲಿದರೂ ಅದೇ ಬಟ್ಟೆ ಬಳಸುತ್ತೇವೆ, ಮಿಕ್ಸಿಯಲ್ಲಿ ರುಬ್ಬಿದ ಬಳಿಕ ಚೆಲ್ಲಿದ್ದನ್ನು ಸ್ವಚ್ಛಗೊಳಿಸಲೂ ಅದೇ ಬಟ್ಟೆಯನ್ನು ಬಳಸಲಾಗುತ್ತದೆ. ಹಾಗಿದ್ದರೆ ಆ ಬಟ್ಟೆಯನ್ನು ಸ್ವಚ್ಛಗೊಳಿಸುವುದು ಹೇಗೆ?
ಮುಖ್ಯವಾಗಿ ಇಂದು ಬಳಸಿದ ಬಟ್ಟೆಯನ್ನು ನಾಳೆಯೂ ಬಳಸದಿರಿ. ಅಂದರೆ ರಾತ್ರಿ ಅಡುಗೆ ಮನೆಯ ಕೆಲಸ ಮುಗಿದ ಬಳಿಕ ಆ ಬಟ್ಟೆಯನ್ನು ತೊಳೆದು ಒಣಗಲು ಹಾಕಿ. ಹಾಗೆಯೇ ಬಿಟ್ಟರೆ ಜಿರಳೆ, ಇರುವೆಗಳಿಗೆ ವಾಸ ಸ್ಥಳವಾಗುತ್ತದೆ. ಮಾತ್ರವಲ್ಲ ಮರುದಿನ ಬೆಳಗ್ಗೆ ಅಡುಗೆ ಮನೆಯಿಂದ ದುರ್ನಾತ ಹೊರಬರಲು ಕಾರಣವಾಗುತ್ತದೆ.
ಅಡುಗೆ ಮನೆಯಲ್ಲಿ ಅದರಲ್ಲೂ ಬ್ಯಾಕ್ಟೀರಿಯಾಗಳು ಬಟ್ಟೆಯಲ್ಲಿ ನೆಲೆ ನಿಲ್ಲುವುದು ಹೆಚ್ಚು ಎಂಬುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ಹಾಗಾಗಿ ಇದನ್ನು ಕೇವಲ ನೀರಿನಿಂದ ತೊಳೆದರೆ ಪ್ರಯೋಜನವಿಲ್ಲ. ಲಿಂಬೆ ರಸ ಹಾಗೂ ವಿನೆಗರ್ ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಐದು ನಿಮಿಷ ನೆನೆಹಾಕಿ. ಬಳಿಕ ತಿಕ್ಕಿ ತೊಳೆದರೆ ಮಾತ್ರ ಇದು ಸ್ವಚ್ಛವಾಗುತ್ತದೆ.
ಈ ಬಟ್ಟೆಯಲ್ಲಿ ಕಲೆಗಳಾಗಿದ್ದರೆ ಒಂದು ಚಮಚ ಉಪ್ಪು ಹಾಕಿ ಬೇಕಿಂಗ್ ಪೌಡರ್ ಸೇರಿಸಿದ ನೀರಿನಲ್ಲಿ ನೆನೆಸಿಟ್ಟು ಒಂದು ಗಂಟೆ ಬಳಿಕ ತೊಳೆಯಿರಿ. ಕಲೆ ಹಾಗೂ ಕಲ್ಮಶಗಳು ದೂರವಾಗುತ್ತವೆ. ಬಿಸಿಲಿನಲ್ಲಿ ಒಣಗಿಸುವುದರಿಂದಲೂ ಹಲವು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.