ಬೆಂಗಳೂರು: ಬೆಂಗಳೂರಿನ ಪೀಣ್ಯ ಬಳಿ ಇರುವ ಅಂದ್ರಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ಅವರನ್ನು ಬಂಧಿಸಲಾಗಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂದ್ರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾಹಿತಿ ಗೊತ್ತಾಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೇಳಿಕೆ ಪಡೆದುಕೊಂಡು ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಉಪ ನಿರ್ದೇಶಕರು ವರದಿ ಪಡೆದು ಲಕ್ಷ್ಮಿದೇವಮ್ಮ ಅವರನ್ನು ಅಮಾನತು ಮಾಡಿದ್ದಾರೆ.
ಘಟನೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ದೂರಿನ ಅನ್ವಯ ಲಕ್ಷ್ಮಿದೇವಮ್ಮ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಪುರಾವೆ ಸಂಗ್ರಹಿಸಿ ಅವರನ್ನು ಬಂಧಿಸಿದ್ದಾರೆ.