ರಾಯಲ್ ಎನ್‌ಫೀಲ್ಡ್ ಡಿಸೆಂಬರ್ 2023 ರ ತಮ್ಮ ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಕಳೆದ ವರ್ಷದ ಡಿಸೆಂಬರ್ ಗಿಂತ ಮಾರಾಟದಲ್ಲಿ ಕುಸಿತ ಕಂಡಿರುವುದಾಗಿ ತಿಳಿಸಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಬೈಕ್ ಗಳ ಮಾರಾಟದಲ್ಲಿ ಶೇಕಡಾ 11 ರಷ್ಟು ಬೆಳವಣಿಗೆಯಾಗಿದೆ ಎಂದಿದೆ.
ಡಿಸೆಂಬರ್ 2022 ರಲ್ಲಿ 68,400 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಡಿಸೆಂಬರ್ 2023 ರಲ್ಲಿ 63,387 ಯುನಿಟ್‌ಗಳಷ್ಟೇ ಮಾರಾಟವಾಗಿದೆ. ಇದರಿಂದ ಕಳೆದ ವರ್ಷದ ಡಿಸೆಂಬರ್ ನಲ್ಲಿನ ವಹಿವಾಟಿಗೆ ಹೋಲಿಸಿದರೆ ಈ ವರ್ಷದ ಡಿಸೆಂಬರ್ ನ ವಹಿವಾಟಿನಲ್ಲಿ ಶೇ.7 ರಷ್ಟು ಕುಸಿತ ಕಂಡಿದೆ.
ಕಳೆದ ವರ್ಷಗಳಲ್ಲಿನ ವ್ಯವಹಾರಕ್ಕೆ ಸಂಬಂಧಿಸಿದಂತೆ 2021-22 ರಲ್ಲಿ 6,16,370 ಬೈಕ್ ಗಳು ಮಾರಾಟವಾಗಿದ್ರೆ 2022-23 ರಲ್ಲಿ ಬೈಕ್ ಗಳ ಮಾರಾಟ ಸಂಖ್ಯೆ 6,85,059 ಗೆ ಏರಿದೆ. ಅಂದರೆ ಮಾರಾಟದಲ್ಲಿ ಶೇ.11ರಷ್ಟು ಬೆಳವಣಿಗೆಯಾಗಿದೆ.
2023 ರಾಯಲ್ ಎನ್‌ಫೀಲ್ಡ್ ಗೆ ಒಂದು ಪ್ರಮುಖ ವರ್ಷವಾಗಿದ್ದು, ಅದು ತನ್ನ ಹೊಸ ಪ್ರಮುಖ ಸೂಪರ್ ಮೀಟಿಯರ್ 650 ಮತ್ತು ಹಿಮಾಲಯನ್ 450 ಅನ್ನು ಬಿಡುಗಡೆ ಮಾಡಿತು. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650, 2024ರಲ್ಲಿ ಬರಲಿದೆ. ಇದು ಸೂಪರ್ ಮೀಟಿಯರ್, ಕಾಂಟಿನೆಂಟಲ್ ಜಿಟಿ ಮತ್ತು ಇಂಟರ್‌ಸೆಪ್ಟರ್ ನಂತರ ಬ್ರ್ಯಾಂಡ್‌ನ ಶ್ರೇಣಿಯಲ್ಲಿ ನಾಲ್ಕನೇ 650 ಸಿಸಿ ಮೋಟಾರ್‌ಸೈಕಲ್ ಆಗಿರುತ್ತದೆ.
ರಾಯಲ್ ಎನ್‌ಫೀಲ್ಡ್ ನ ಸಿಇಒ ಬಿ ಗೋವಿಂದರಾಜನ್ ಡಿಸೆಂಬರ್ 2023 ರ ತಿಂಗಳ ಕಾರ್ಯಕ್ಷಮತೆಯ ಕುರಿತು ಮಾತನಾಡುತ್ತಾ, “ಡಿಸೆಂಬರ್ ತಿಂಗಳ ಆರಂಭದಲ್ಲಿ ನಾವು ಶಾಟ್‌ಗನ್ 650 ಅನ್ನು ಪರಿಚಯಿಸಿದ್ದೇವೆ. ನಾವು 2024 ಕ್ಕೆ ಸಜ್ಜಾಗುತ್ತಿದ್ದಂತೆ ಮತ್ತಷ್ಟು ಆಸಕ್ತಿದಾಯಕ ಮೋಟಾರ್‌ಸೈಕಲ್ ಬಿಡುಗಡೆಯೊಂದಿಗೆ ಇನ್ನಷ್ಟು ರೋಮಾಂಚನಕಾರಿ ವರ್ಷವನ್ನು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.